ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತ ರನ್ಯಾ ರಾವ್ಗೆ ಉಕ್ಕಿನ ಸ್ಥಾವರ ನಿರ್ಮಿಸಲು ಹಿಂದಿನ ಬಿಜೆಪಿ ಸರಕಾರದಿಂದ ಭೂಮಿ ಮಂಜೂರು: ಕೆಐಎಡಿಬಿ

ರನ್ಯಾ ರಾವ್
ಬೆಂಗಳೂರು: ದುಬೈನಿಂದ ಚಿನ್ನ ಕಳ್ಳಸಾಗಣೆ ಆರೋಪದಲ್ಲಿ ಬಂಧಿತರಾಗಿರುವ ಕನ್ನಡ ಚಲನಚಿತ್ರ ನಟಿ ರನ್ಯಾ ರಾವ್ ಅವರಿಗೆ ಹಿಂದಿನ ಬಿಜೆಪಿ ಸರಕಾರ 2023ರ ಫೆಬ್ರವರಿಯಲ್ಲಿ ಉಕ್ಕಿನ ಸ್ಥಾವರ ಸ್ಥಾಪಿಸಲು 12 ಎಕರೆ ಜಮೀನು ಮಂಜೂರು ಮಾಡಿದೆ ಎಂದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಹೇಳಿದೆ.
ರನ್ಯಾ ರಾವ್ ಅವರು ನಿರ್ದೇಶಕಿ ಆಗಿರುವ ಕ್ಸಿರೋಡಾ ಇಂಡಿಯಾ ಪ್ರೈವೆಟ್ ಲಿ. ಕಂಪೆನಿಗೆ ತುಮಕೂರು ಜಿಲ್ಲೆಯ ಶಿರಾದಲ್ಲಿ ಕೆಐಎಡಿಬಿ ವತಿಯಿಂದ 2023ರ ಜನವರಿಯಲ್ಲಿ 12 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಈ ಕಂಪೆನಿಗೆ ನಟಿಯ ಸಹೋದರ ಸಹ ನಿರ್ದೇಶಕರಾಗಿದ್ದಾರೆ ಎಂದು ಕೆಎಐಡಿಬಿಯಿಂದ ಜಮೀನು ಮಂಜೂರಾತಿ ಮಾಡಿಸಿಕೊಂಡಿರುವ ದಾಖಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಇದರ ಬೆನ್ನಲ್ಲೇ ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ್ ಅವರ ಕಚೇರಿಯು ಪ್ರಕಟಣೆ ಹೊರಡಿಸಿದೆ. ತುಮಕೂರು ಜಿಲ್ಲೆಯ ಸಿರಾ ಕೈಗಾರಿಕಾ ಪ್ರದೇಶದಲ್ಲಿ ರನ್ಯಾ ಅವರ ಸಂಸ್ಥೆ ಕ್ಷಿರೋಡಾ ಇಂಡಿಯಾಗೆ ಜಮೀನು ಹಂಚಿಕೆಗೆ ಸಂಬಂಧಿಸಿದಂತೆ 2023ರ ಫೆಬ್ರವರಿ 22ರಂದು ಸರಕಾರ ಹೊರಡಿಸಿದ ಅಂತಿಮ ಅಧಿಸೂಚನೆ ಪ್ರತಿಯನ್ನು ಹಂಚಿಕೊಂಡಿದೆ.
2023ರ ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಪಾಟೀಲ್ ಅವರ ಕಚೇರಿ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಈ ಅಧಿಸೂಚನೆಯನ್ನು 2023ರ ಜನವರಿಯಲ್ಲಿ ಅಂದರೆ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಹೊರಡಿಸಲಾಗಿದೆ.
ಸಚಿವರ ಕಚೇರಿ ಹಂಚಿಕೊಂಡ ಕರ್ನಾಟಕ ಸರಕಾರದ ನಡಾವಳಿಗಳಲ್ಲಿ, ʼತುಮಕೂರು ಜಿಲ್ಲೆಯ ಸಿರಾ ಕೈಗಾರಿಕಾ ಪ್ರದೇಶದಲ್ಲಿ ಉಕ್ಕಿನ ಉತ್ಪನ್ನ- ಟಿಎಮ್ಟಿ ಬಾರ್ಗಳು, ರಾಡ್ಗಳು ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳ ತಯಾರಿಕೆಗಾಗಿ ಘಟಕವನ್ನು ಸ್ಥಾಪಿಸಲು ಕ್ಸಿರೋಡಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಪ್ರಸ್ತಾವನೆಗೆ ಅನುಮೋದನೆʼ ಎಂದು ಉಲ್ಲೇಖಿಸಲಾಗಿದೆ.
138 ಕೋಟಿ ರೂಪಾಯಿಗಳ ಹೂಡಿಕೆ ಪ್ರಸ್ತಾವನೆಗೆ ತಾತ್ವಿಕ ಅನುಮೋದನೆ ನೀಡಲು ಸರಕಾರ ಉತ್ಸುಕವಾಗಿದೆ. ಇದರಿಂದ ಮೂಲಸೌಕರ್ಯ ನೆರವು, ಪ್ರೋತ್ಸಾಹಗಳೊಂದಿಗೆ ಸುಮಾರು 160 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ನಡಾವಳಿಗಳಲ್ಲಿ ಉಲ್ಲೇಖಿಸಲಾಗಿದೆ.
ಕೆಐಎಡಿಬಿ ಸಿಇಒ ಮಹೇಶ್ ಈ ಕುರಿತು ಪ್ರತಿಕ್ತಿಯಿಸಿ, ಹಿಂದಿನ ಸರಕಾರ(ಬಿಜೆಪಿಯನ್ನು ಉಲ್ಲೇಖಿಸಿ) 2023ರ ಜನವರಿ 2ರಂದು ಕ್ಷಿರೋಡಾ ಇಂಡಿಯಾಕ್ಕೆ 12 ಎಕರೆ ಭೂಮಿಯನ್ನು ಮಂಜೂರು ಮಾಡಿದೆ. ತುಮಕೂರು ಜಿಲ್ಲೆಯ ಸಿರಾ ಕೈಗಾರಿಕಾ ಪ್ರದೇಶದಲ್ಲಿರುವ ಈ ಭೂಮಿಯನ್ನು 137ನೇ ರಾಜ್ಯ ಮಟ್ಟದ ಏಕ ಗವಾಕ್ಷಿ ತೆರವು ಸಮಿತಿ (ಎಸ್ಎಲ್ಎಸ್ಡಬ್ಲ್ಯುಸಿಸಿ) ಸಭೆಯಲ್ಲಿ ಮಂಜೂರು ಮಾಡಲು ಅನುಮೋದನೆ ನೀಡಲಾಗಿತ್ತು ಎಂದು ಹೇಳಿದರು.
ಕೆಐಎಡಿಬಿ ಪತ್ರಿಕಾ ಪ್ರಕಟಣೆಯ ಪ್ರಕಾರ, ಕಂಪೆನಿಯು ಸ್ಟೀಲ್ ಟಿಎಂಟಿ ಬಾರ್ಗಳು, ರಾಡ್ಗಳು ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳ ಉತ್ಪಾದನಾ ಘಟಕವನ್ನು 138 ಕೋಟಿ ರೂ ಹೂಡಿಕೆಯೊಂದಿಗೆ ಸ್ಥಾಪಿಸಲು ಪ್ರಸ್ತಾವನೆಯನ್ನು ಸಲ್ಲಿಸಿದೆ. ಈ ಯೋಜನೆಯು ಸರಿಸುಮಾರು 160 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ಚಲನ ಚಿತ್ರ ನಟಿ ರನ್ಯಾ ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 12.56 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಗಳೊಂದಿಗೆ ಬಂಧಿಸಲಾಗಿತ್ತು. ಆಕೆಯ ನಿವಾಸದಲ್ಲಿ ತಪಾಸಣೆ ನಡೆಸಿ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು 2.67 ಕೋಟಿ ರೂ. ಮೌಲ್ಯದ ಭಾರತೀಯ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿತ್ತು.