ರನ್ಯಾ ರಾವ್ ಪ್ರಕರಣ: ಶಿಷ್ಟಾಚಾರ ಸೌಲಭ್ಯ, ಕರ್ತವ್ಯ ಲೋಪ ಕುರಿತು ತನಿಖೆಗೆ ಆದೇಶ

PC: x.com/htTweets
ಬೆಂಗಳೂರು: ಪೊಲೀಸ್ ಅಧಿಕಾರಿಯ ಪುತ್ರಿ, ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ಲೋಪ ಎಸಗಿರಬಹುದಾದ ಸಂಭಾವ್ಯತೆ ಬಗ್ಗೆ ಸಿಐಡಿ ತನಿಖೆ ಕೈಗೊಂಡಿದೆ. ಮತ್ತೊಂದೆಡೆ, ಶಿಷ್ಟಾಚಾರ ಸೌಲಭ್ಯ ನೀಡಿರುವ ಸಂಬಂಧ ತನಿಖೆ ನಡೆಸಲು ಹಿರಿಯ ಐಎಎಸ್ ಅಧಿಕಾರಿ ಗೌರವ ಗುಪ್ತಾ ಅವರನ್ನು ನೇಮಿಸಿ ರಾಜ್ಯ ಸರಕಾರ ಆದೇಶಿಸಿದೆ.
ದುಬೈನಿಂದ ನಗರಕ್ಕೆ ಅಕ್ರಮವಾಗಿ ಚಿನ್ನ ಸಾಗಾಣಿಕೆ ಮಾಡುತ್ತಿದ್ದ ಆರೋಪದ ಮೇರೆಗೆ ನಟಿ ರನ್ಯಾ ರಾವ್ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್ಐ ಅಧಿಕಾರಿಗಳು ಬಂಧಿಸಿದ್ದರು. ರನ್ಯಾ ವಿದೇಶಗಳಿಗೆ ಹೋಗುವಾಗ ಮತ್ತು ವಾಪಸ್ ಬರುವ ಸಂದರ್ಭದಲ್ಲಿ ಪೆÇಲೀಸ್ ಸಿಬ್ಬಂದಿಗಳಿಂದ ಲೋಪಗಳು ಆಗಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ.ಹಾಗಾಗಿ, ಪೊಲೀಸ್ ಸಿಬ್ಬಂದಿಗಳ ಕರ್ತವ್ಯ ಲೋಪ ಎಸಗಿರಬಹುದಾದ ಸಂಭಾವ್ಯತೆ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಸರಕಾರ ಸಿಐಡಿ ತನಿಖೆಗೆ ವಹಿಸಿದೆ.
ಈ ಪ್ರಕರಣದ ವಿಚಾರಣೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಅದರ ವರದಿಯನ್ನು ಆದಷ್ಟು ಬೇಗ ಸರಕಾರಕ್ಕೆ ಸಲ್ಲಿಸಬೇಕೆಂದು ಆದೇಶಿಸಲಾಗಿದೆ. ಸಿಐಡಿ ತನಿಖಾಧಿಕಾರಿಗಳಿಗೆ ವಿಚಾರಣೆ ನಡೆಸಲು ಸಂಬಂಧಪಟ್ಟ ಇಲಾಖೆಗಳು ಸಂಪೂರ್ಣ ಸಹಕಾರ ಮತ್ತು ಅವಶ್ಯಕ ದಾಖಲಾತಿಗಳನ್ನು ಸಹ ಒದಗಿಸಬೇಕೆಂದು ಎಂದೂ ಸರಕಾರ ಸೂಚನೆ ನೀಡಿದೆ.
ಆದೇಶ: ಮತ್ತೊಂದೆಡೆ, ಪ್ರಕರಣದ ವಿಚಾರಣೆಯ ಸಮಯದಲ್ಲಿ ಬಂಧಿತ ರನ್ಯಾ ರಾವ್ ಉನ್ನತ ಅಧಿಕಾರಿಗಳಿಗೆ ವಿಮಾನ ನಿಲ್ದಾಣಗಳಲ್ಲಿ ನೀಡಲಾಗುವ ಶಿಷ್ಟಾಚಾರಗಳನ್ನು ಬಳಸಿಕೊಂಡಿರುವ ಬಗ್ಗೆ, ಐಪಿಎಸ್ ಅಧಿಕಾರಿ ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ರಾಮಚಂದ್ರರಾವ್ ಹೆಸರನ್ನು ಬಳಕೆ ಮಾಡಿಕೊಂಡು ಮತ್ತು ಅವರಿಗೆ ನೀಡುವ ಶಿಷ್ಟಾಚಾರ ಸೇವೆಗಳನ್ನು ರನ್ಯಾ ರಾವ್ ದುರ್ಬಳಕೆ ಮಾಡಿಕೊಂಡು ವಿಮಾನ ನಿಲ್ದಾಣಗಳಲ್ಲಿ ತಪಾಸಣೆಗಳನ್ನು ತಪ್ಪಿಸಿಕೊಂಡು ಅಕ್ರಮ ಕೃತ್ಯಗಳನ್ನು ನಡೆಸಿರುವ ಬಗ್ಗೆ ವರದಿಯಾಗಿದೆ.
ಹೀಗಾಗಿ ಶಿಷ್ಟಾಚಾರ ಸೌಲಭ್ಯಗಳ ಬಳಕೆಯನ್ನು ಪಡೆದುಕೊಳ್ಳಲು ಕಾರಣವಾದ ಅಂಶಗಳು ಹಾಗೂ ಸಂದರ್ಭಗಳು ಮತ್ತು ಈ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಪಾತ್ರದ ಬಗ್ಗೆ, ತನಿಖೆ ನಡೆಸುವುದು ಅಗತ್ಯವೆಂದು ಸರಕಾರ ಪರಿಗಣಿಸಿ, ತನಿಖಾಧಿಕಾರಿ ಆಗಿ ಹಿರಿಯ ಐಎಎಸ್ ಅಧಿಕಾರಿ ಗೌರವ ಗುಪ್ತಾ ಅವರನ್ನು ನೇಮಿಸಲಾಗಿದೆ ಎಂದು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ.
ಸಿಬಿಐ ತನಿಖೆ: ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳು ಕೈಗೆತ್ತಿಕೊಂಡಿದ್ದು, ಬೆಂಗಳೂರಿನಲ್ಲಿರುವ ರನ್ಯಾ ರಾವ್ರ ನಿವಾಸ, ಅವರ ವಿವಾಹ ಜರುಗಿದ ಹೋಟೆಲ್, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.
ರನ್ಯಾ ರಾವ್ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದ ಅತಿಥಿಗಳು, ಬಂದಿರುವ ದುಬಾರಿ ಉಡುಗೊರೆಗಳು ಕುರಿತು ತಿಳಿದುಕೊಳ್ಳಲು ವಿವಾಹದ ದೃಶ್ಯಾವಳಿಗಳು ಮತ್ತು ಅತಿಥಿಗಳ ಪಟ್ಟಿಗಳನ್ನು ಸೂಕ್ಷ್ಮವಾಗಿ ಸಿಬಿಐ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.