ಸರಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರಕಾರ | ಆ.1 ರಿಂದ 7ನೇ ವೇತನ ಆಯೋಗ ಜಾರಿ : ಸಂಪುಟ ಸಭೆಯಲ್ಲಿ ನಿರ್ಣಯ
Photo : ಸಾಂದರ್ಭಿಕ ಚಿತ್ರ
ಬೆಂಗಳೂರು : ರಾಜ್ಯ ಸರಕಾರಿ ನೌಕರರ ಬಹುದಿನ ಬೇಡಿಕೆಯಾದ 7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೊಳಿಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಮಾಡಲಾಗಿದೆ. ಸರಕಾರಿ ನೌಕರಿಗೆ ಈಗಾಗಲೇ ಶೇ.10.5ರಷ್ಟು ಮಧ್ಯಂತರ ವೇತನ ಪರಿಷ್ಕರಣೆ ಪ್ರಕಟಿಸಿದ್ದ ರಾಜ್ಯ ಸಚಿವ ಸಂಪು ಸಭೆ ಇದೀಗ ಆಗಸ್ಟ್ 1ರಿಂದ ಅನ್ವಯ ಆಗುವಂತೆ ಮೂಲ ವೇತನದ ಶೇ. 27.5 ರಷ್ಟು ಹೆಚ್ಚಳ ಮಾಡಬೇಕು ಎಂದು ತೀರ್ಮಾನ ಮಾಡಿದೆ.
ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ ರಾವ್ ನೇತೃತ್ವದ ಸಮಿತಿ ಮಾಡಿದ್ದ ಶಿಫಾರಸು ಆಧರಿಸಿ ರಾಜ್ಯ ಸರಕಾರ ಇದೀಗ ಸರಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ.
ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರಕಾರಿ ನೌಕರರಿಗೆ ಏಳನೆ ವೇತನ ಆಯೋಗದ ಶಿಫಾರಸ್ಸು ಜಾರಿ ಸಂಬಂಧ ಜು.16 ಕಲಾಪದಲ್ಲಿ ಅಧಿಕೃತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಿಸುವ ಸಾಧ್ಯತೆಗಳಿವೆ.
ಈ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗ ವರದಿ ಜಾರಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಯಾವುದೇ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಗೆದುಕೊಂಡಿರಲಿಲ್ಲ. ಅಲ್ಲದೇ, ಸಂಪನ್ಮೂಲ ಕೊರತೆ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ಸಲಹೆ ಆಧರಿಸಿ ವೇತನ ಆಯೋಗದ ಶಿಫಾರಸ್ಸಿನಂತೆ ಸರಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ತೀರ್ಮಾನವನ್ನು ರಾಜ್ಯ ಸರಕಾರ ಮುಂದೂಡಿಕೊಂಡು ಬಂದಿತ್ತು.
7ನೇ ವೇತನ ಆಯೋಗ ವರದಿ ಜಾರಿಗಾಗಿ ಜು.29ರಂದು ಅನಿರ್ದಿಷ್ಠಾವಧಿ ಮುಷ್ಕರ ಆರಂಭಿಸುವ ಎಚ್ಚರಿಕೆಯನ್ನು ಸರಕಾರಿ ನೌಕರರ ಸಂಘಟನೆ ನೀಡಿತ್ತು. ಈ ಕುರಿತು ಕಳೆದ ಶುಕ್ರವಾರ ಮುಖ್ಯ ಕಾರ್ಯದರ್ಶಿಗಳಿಗೆ ಮುಷ್ಕರ ನೋಟಿಸ್ ತಲುಪಿಸಿದ್ದರು. ಈ ಹೋರಾಟಕ್ಕೆ ಮುನ್ನವೇ ಸರಕಾರ ಎಚ್ಚೆತ್ತುಕೊಂಡಂತಾಗಿದೆ.