ಹೇಮಾವತಿ ನದಿಯಲ್ಲಿ ಮುಳುಗಿ ಸರ್ಕಾರಿ ಆಸ್ಪತ್ರೆಯ ವೈದ್ಯ ಮೃತ್ಯು
ಚಂದ್ರಶೇಖರ್ - ಮೃತ ವೈದ್ಯ
ಹಾಸನ: ಸರ್ಕಾರಿ ವೈದ್ಯರೊಬ್ಬರು ನದಿಯ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಗೊರೂರಿನ ಹೇಮಾವತಿ ನದಿಯಲ್ಲಿ ವರದಿಯಾಗಿದೆ.
ಹೊಳೆನರಸೀಪುರ ತಾಲೂಕಿನ ಕೆರಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್ಸಿ)ದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ್ (31) ಮೃತಪಟ್ಟ ವೈದ್ಯ ಎಂದು ಗುರುತಿಸಲಾಗಿದೆ.
ಮೃತ ಚಂದ್ರಶೇಖರ್ ನಿನ್ನೆ (ಸೆ.15, ಶುಕ್ರವಾರ) ಕರ್ತವ್ಯಕ್ಕೂ ಮುನ್ನ ಹೇಮಾವತಿ ನದಿ ಹಿನ್ನೀರಿನ ಖೋನಾಪುರ ಐಲ್ಯಾಂಡ್ನಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ತೆರಳಿದ್ದರೆನ್ನಲಾಗಿದ್ದು, ಪೂಜೆಗೂ ಮುನ್ನ ಹೇಮಾವತಿ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದರು. ಹೇಮಾವತಿ ನದಿ ನೀರು ಸಂಪೂರ್ಣ ಕಡಿಮೆಯಾಗಿದೆ ಎಂದು ಆಳ ಅರಿಯದೆ ಇಳಿದ ಚಂದ್ರಶೇಖರ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ರಾತ್ರಿಯವರೆಗೂ ಮಗ ಮನೆಗೆ ಬಾರದೆ ಇದ್ದಾಗ ಪೋಷಕರು ಕರೆ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸದೇ ಇದ್ದಾಗ ಅರಕಲಗೂಡು ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದಾರೆ.
ಒಂದೇ ಸ್ಥಳದಲ್ಲಿ ಕಾರು ನಿಂತಿದ್ದನ್ನು ಗಮನಿಸಿದ್ದ ಕರ್ತವ್ಯದಲ್ಲಿದ್ದ ಗೊರೂರು ಪೊಲೀಸರು ಅರಕಲಗೂಡು ಪೊಲೀಸರ ಸೂಚನೆ ಮೇರೆಗೆ ನದಿಯಲ್ಲಿ ಹುಡಕಾಟ ನಡೆಸಿದ್ದಾರೆ. ಅಣತಿ ದೂರದಲ್ಲಿ ಚಂದ್ರಶೇಖರ್ ಮೃತದೇಹ ತೇಲುತ್ತಿರುವುದು ಕಂಡು ಬಂದಿದೆ. ಘಟನೆ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.