ಗುತ್ತಿಗೆ ಆಧಾರದ ಸಿಬ್ಬಂದಿಗಳ ವೇತನ ಪರಿಷ್ಕರಣೆ ; ರಾಜ್ಯ ಸರಕಾರ ಆದೇಶ
ಬೆಂಗಳೂರು : ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ವಿಧಾನಸಭೆ, ವಿಧಾನ ಪರಿಷತ್, ಸಂಸದರು, ರಾಜ್ಯಸಭಾ ಸದಸ್ಯರ ಆಪ್ತ ಸಿಬ್ಬಂದಿ ಸೇರಿದಂತೆ ವಿವಿಧ ಸಚಿವಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ವೇತನ ಪರಿಷ್ಕರಿಸಿ ರಾಜ್ಯ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ.
ಏಳನೇ ವೇತನ ಆಯೋಗದ ಶಿಫಾರಸ್ಸಿನ ಮೇರೆಗೆ ಕರ್ನಾಟಕ ನಾಗರಿಕ ಸೇವೆಗಳು (ಪರಿಷ್ಕೃತ ವೇತನ) ನಿಯಮಗಳು 2024ನ್ನು ರಾಜ್ಯ ಸರಕಾರ ಜಾರಿಗೆ ತಂದಿದ್ದು, ಅದರಂತೆ ಗುತ್ತಿಗೆ ಆಧಾರದ ಸಿಬ್ಬಂದಿಯ ಪರಿಷ್ಕೃತ ಸಂಚಿತ ವೇತನ ನ.1ರಿಂದ ಜಾರಿಗೆ ಬಂದಿದೆ.
ಸಿಎಂ, ಡಿಸಿಎಂ, ಸಚಿವರು ಸೇರಿದಂತೆ ವಿವಿಧೆಡೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಸಂಚಿತ ವೇತನ ಪರಿಷ್ಕರಣೆ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದರೆ, ಹೊರಗುತ್ತಿಗೆ ಸಿಬ್ಬಂದಿಗೆ ಅನ್ವಯವಾಗುವುದಿಲ್ಲ ಎಂಬ ಷರತ್ತು ವಿಧಿಸಲಾಗಿದೆ.
ವಿಶೇಷ ಅಧಿಕಾರಿ/ವಿಶೇಷ ಕರ್ತವ್ಯಾಧಿಕಾರಿಗಳಿಗೆ 69,250ರೂ., ಸಹಾಯಕರ ಹುದ್ದೆ ಮತ್ತು ಶೀಘ್ರ ಲಿಪಿಗಾರರಿಗೆ 49,050 ರೂ., ಕಿರಿಯ ಸಹಾಯಕ/ದ್ವಿತೀಯ ದರ್ಜೆ ಸಹಾಯಕ, ಬೆರಳಚ್ಚುಗಾರರು ಹಾಗೂ ವಾಹನ ಚಾಲಕರಿಗೆ 34,100 ರೂ. ಹಾಗೂ ‘ಡಿ’ ದರ್ಜೆ ನೌಕರರಿಗೆ 27ಸಾವಿರ ರೂ.ವರೆಗೆ ವೇತನ ಪರಿಷ್ಕರಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಬಿ.ಡಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.