ಕೋಟ್ಯಂತರ ರೂ. ಮೌಲ್ಯದ ಬೇನಾಮಿ ಆಸ್ತಿ; ಅಜಿತ್ ಕುಮಾರ್ ರೈ ಸೇವೆಯಿಂದ ಅಮಾನತುಗೊಳಿಸಿ ಸರಕಾರ ಆದೇಶ

ಎಸ್.ಅಜಿತ್ ಕುಮಾರ್ ರೈ
ಬೆಂಗಳೂರು, ಜು.1: ‘ಆದಾಯಕ್ಕಿಂತ ಹೆಚ್ಚಿನ ಅಕ್ರಮ ಸಂಪತ್ತು’ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬೆಂಗಳೂರು ಪೂರ್ವ ತಾಲೂಕಿನ ಹಿಂದಿನ ತಹಶೀಲ್ದಾರ್ ಎಸ್.ಅಜಿತ್ ಕುಮಾರ್ ರೈ ಅವರನ್ನು ಸರಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಶನಿವಾರ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಅಜಿತ್ ಕುಮಾರ್ ರೈ ತಮ್ಮ ಬಲ್ಲ ಮೂಲಗಳ ಆದಾಯಕ್ಕಿಂತ ಶೇ.69.80ರಷ್ಟು ಹೆಚ್ಚಿನ ಅಕ್ರಮ ಸಂಪತ್ತನ್ನು ಹೊಂದಿರುವುದು ಲೋಕಾಯುಕ್ತ ಪೊಲೀಸರ ದಾಳಿಯ ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ಜೂ.28ರಿಂದ ನ್ಯಾಯಾಂಗ ಬಂಧನದಲ್ಲಿರುವುದರಿಂದ ಅವರನ್ನು ಅಂದಿನಿಂದಲೆ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ವರೆಗೆ ಇಲಾಖಾ ವಿಚಾರಣೆ ಬಾಕಿ ಇರಿಸಿ, ಸರಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಲಾಗಿದೆ.
ಅಮಾನತ್ತಿನ ಅವಧಿಯಲ್ಲಿ ಅಜಿತ್ ಕುಮಾರ್ ರೈ ನಿಯಮಾನುಸಾರ ಜೀವನಾಧಾರ ಭತ್ತೆಯನ್ನು ಪಡೆಯಲು ಅರ್ಹರಿರುತ್ತಾರೆ. ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯಿಲ್ಲದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ ಎಂದು ಕಂದಾಯ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ ಜಯಲಕ್ಷ್ಮಿ ಆದೇಶದಲ್ಲಿ ತಿಳಿಸಿದ್ದಾರೆ.