ಲಾಭದಾಯಕ ಹುದ್ದೆ | ಶಾಸಕರ ಅನರ್ಹತೆ ತಡೆ ‘ಮಸೂದೆ’ಗೆ ರಾಜ್ಯಪಾಲರ ಅಂಕಿತ

ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್
ಬೆಂಗಳೂರು: ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು ಇತರ ಲಾಭದಾಯಕ ಹುದ್ದೆ ಹೊಂದಿದ ಕಾರಣಕ್ಕೆ ಶಾಸಕ ಸ್ಥಾನದಿಂದ ಅನರ್ಹರಾಗುವುದನ್ನು ತಡೆಗಟ್ಟುವ ಮಹತ್ವದ ಮಸೂದೆಗೆ ರಾಜ್ಯಪಾಲರು ಮಂಗಳವಾರ ಸಹಿ ಹಾಕಿದ್ದಾರೆ.
ಈ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಶಾಸಕರು ಮತ್ತು ಪರಿಷತ್ ಸದಸ್ಯರು, ಸಿಎಂ, ಡಿಸಿಎಂ ಸಲಹೆಗಾರರು ಅಥವಾ ಆಯೋಗದ ಅಧ್ಯಕ್ಷರು ಸೇರಿದಂತೆ ಇನ್ನಿತರ ಹುದ್ದೆಗಳಿಗೆ ನೇಮಕಗೊಂಡರೆ ಅವರನ್ನು ಅನರ್ಹಗೊಳಿಸಲು ಕಾಯ್ದೆಯಲ್ಲಿ ಅವಕಾಶವಿತ್ತು.
ಇದೀಗ ಅವರನ್ನು ರಕ್ಷಿಸಲು ತಿದ್ದುಪಡಿ ಮಸೂದೆ ರೂಪಿಸಲಾಗಿತ್ತು. ವಿಧಾನಸಭೆಯಲ್ಲಿ ‘ಕರ್ನಾಟಕ ವಿಧಾನ ಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ) ಮಸೂದೆ' ಮಂಡಿಸುವ ವೇಳೆ ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಸದಸ್ಯರಿಂದ ವಿರೋಧ ವ್ಯಕ್ತವಾಗಿತ್ತು.
ಆ ಬಳಿಕ 2024ರ ಫೆಬ್ರುವರಿಯಲ್ಲಿ ವಿಧಾನಮಂಡಲದ ಅನುಮೋದನೆ ಪಡೆದ ಮಸೂದೆಯನ್ನು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಇದೀಗ ಆ ಮಸೂದೆಗೆ ರಾಜ್ಯಪಾಲರ ಅಂಕಿತ ಸಿಕ್ಕಿದೆ. ಬಿ.ಆರ್.ಪಾಟೀಲ್, ಬಸವರಾಜ ರಾಯರಡ್ಡಿ ಮತ್ತು ಆರ್.ವಿ.ದೇಶಪಾಂಡೆ ಅನರ್ಹತೆಯಿಂದ ಭೀತಿಯಿಂದ ಪಾರಾದಂತೆ ಆಗಿದೆ.