ರಾಜ್ಯದಲ್ಲಿ ‘ಬಿಸಿ ಗಾಳಿ’ ಹೆಚ್ಚಳ : ಆರೋಗ್ಯ ರಕ್ಷಣೆಗೆ ಸಲಹೆ ಪ್ರಕಟಿಸಿದ ಸರಕಾರ

ಸಾಂದರ್ಭಿಕ ಚಿತ್ರ | PC : NDTV
ಬೆಂಗಳೂರು : ರಾಜ್ಯದಲ್ಲಿ ಬಿಸಿಗಾಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಸಲಹೆಗಳನ್ನು ಪ್ರಕಟಿಸಿದೆ. ಬಿಸಿಗಾಳಿಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಉಂಟಾಗಲಿದ್ದು, ಆರೋಗ್ಯ ರಕ್ಷಣೆಗೆ ಸಲಹೆಗಳನ್ನು ಪಾಲಿಸಬೇಕು ಎಂದು ಇಲಾಖೆ ತಿಳಿಸಿದೆ.
ಬಾಯಾರಿಕೆಯು ನಿರ್ಜಲೀಕರಣದ ಲಕ್ಷಣವಾಗಿದ್ದು, ಇದನ್ನು ತಡೆಯಲು ಸಾರ್ವಜನಿಕರು ಹೆಚ್ಚು ನೀರು ಕುಡಿಯಬೇಕು. ಬಾಯಾರಿಕೆ ಇಲ್ಲದಿದ್ದರೂ ಆಗಾಗ್ಗೆ ನೀರನ್ನು ಸೇವಿಸಬೇಕು. ಪ್ರಯಾಣ ಮಾಡುವ ಸಮಯದಲ್ಲೂ ಕುಡಿಯಲು ನೀರನ್ನು ಜೊತೆಗೆ ತೆಗೆದುಕೊಂಡು ಹೋಗುವುದು ಅಗತ್ಯವಾಗಿದೆ ಎಂದು ತಿಳಿಸಿದೆ.
ಸೇವನೆಗೆ ಉತ್ತಮ: ಮೌಖಿಕ ಪುನರ್ಜಲೀಕರಣ ದ್ರಾವಣ(ಒಆರ್ಎಸ್) ಹಾಗೂ ಮನೆಯಲ್ಲಿಯೇ ಸಿದ್ಧಪಡಿಸಿದ ನಿಂಬೆ ಹಣ್ಣಿನ ಶರಬತ್ತು, ಮಜ್ಜಿಗೆ/ಲಸ್ಸಿ, ಹಣ್ಣಿನ ಜ್ಯೂಸ್ಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸುವುದು ಉತ್ತಮ. ಹಾಗೆಯೇ ಈ ಋತುಮಾನದಲ್ಲಿ ಲಭ್ಯವಿರುವ ಹಾಗೂ ಹೆಚ್ಚು ನೀರಿನ ಅಂಶವನ್ನು ಹೊಂದಿರುವ ಹಣ್ಣು-ತರಕಾರಿಗಳಾದ ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್, ಸೌತೆಕಾಯಿ,ಎಳೆನೀರುಗಳನ್ನು ಹೆಚ್ಚಾಗಿ ಸೇವಿಸಬೇಕು.
ಬಿಸಿಲಿನಿಂದ ರಕ್ಷಣೆ: ತಿಳಿ ಬಣ್ಣದ, ಅಳಕವಾದ ಹತ್ತಿಯ ಬಟ್ಟೆಯನ್ನು ಧರಿಸುವುದು ಉತ್ತಮ. ಬಿಸಿಲಿನಲ್ಲಿ ಹೊರ ಹೋಗುವ ಸಂದರ್ಭಗಳಲ್ಲಿ ಛತ್ರಿ, ಟೋಪಿ/ಹ್ಯಾಟ್, ಟವೆಲ್ ಅಥವಾ ಇನ್ನಾವುದೇ ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸಿ, ಬಿಸಿಲಿನಿಂದ ರಕ್ಷಣೆ ಪಡೆಯುವುದು ಉತ್ತಮ ಎಂದು ಆರೋಗ್ಯ ಇಲಾಖೆ ಹೇಳಿದೆ.
ಬಿಸಿಲಿನಲ್ಲಿ ನಡೆಯುವ ಸಂದರ್ಭದಲ್ಲಿ ಪಾದರಕ್ಷೆ, ಚಪ್ಪಲಿ ಅಥವಾ ಶೂಸ್ಗಳನ್ನು ಧರಿಸಬೇಕು. ರೇಡಿಯೋ, ದೂರದರ್ಶನ ಹಾಗೂ ದಿನಪತ್ರಿಕೆಗಳ ಮೂಲಕ ಸ್ಥಳೀಯ ಹವಾಮಾನದ ಮಾಹಿತಿಯನ್ನು ಪಡೆದು, ಅದರಂತೆ ಚಟುವಟಿಕೆಗಳನ್ನು ಯೋಜಿಸುವುದು ಉತ್ತಮ. ಹವಾಮಾನದ ಕುರಿತು ಕಾಲಕಾಲಕ್ಕೆ ಮಾಹಿತಿಯನ್ನು https://www.ksndmc.org/default.aspx ಜಾಲತಾಣದಲ್ಲಿ ಮಾಹಿತಿಯನ್ನು ಪಡೆಯಬಹುದು ಎಂದು ಸಲಹೆ ನೀಡಿದೆ.
ಉತ್ತಮ ಗಾಳಿ ಬೀಸುವ ಹಾಗೂ ತಣ್ಣಗಿರುವ ಪ್ರದೇಶದಲ್ಲಿರಬೇಕು. ನೇರವಾಗಿ ಸೂರ್ಯನ ಬೆಳಕು ಹಾಗೂ ಬಿಸಿ ಗಾಳಿಯು ಮನೆಯ ಒಳಗೆ ಬರದಂತೆ ತಡೆಯಲು, ಹಗಲು ಹೊತ್ತಿನಲ್ಲಿ ಕಿಟಕಿಗಳನ್ನು ಪರದೆಗಳಿಂದ ಮುಚ್ಚಿಡಬೇಕು, ತಣ್ಣನೆಯ ಗಾಳಿಯ ಸಂಚಾರಕ್ಕೆ ಅನುಕೂಲವಾಗುವಂತೆ, ರಾತ್ರಿಯ ಹೊತ್ತು ಕಿಟಕಿಗಳನ್ನು ತೆರೆಡಿಡಬೇಕು.
ಹೊರಾಂಗಣ ಚಟುವಟಿಕೆಗಳನ್ನು ಆದಷ್ಟೂ ಬೆಳಗಿನ ಹೊತ್ತು ಅಥವಾ ಸಂಜೆಗೆ ಸೀಮಿತವಿರುವಂತೆ ಬದಲಾಯಿಸಿಕೊಳ್ಳಬೇಕು. ಹೊರಾಂಗಣ ಪ್ರದೇಶಗಳಲ್ಲಿ ಆಯೋಜಿಸಲಾಗುವ ಚಟುವಟಿಕೆಗಳು ಬೆಳಗ್ಗೆ 11 ಗಂಟೆಯ ಒಳಗೆ ಮುಕ್ತಾಯಗೊಳಿಸುವುದು ಉತ್ತಮ. ಬಿಸಿಲಿನಲ್ಲಿ ಅಂದರೆ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಹೊರಹೋಗುವುದನ್ನು ತಪ್ಪಿಸಬೇಕು.
ಸಭಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಡ್ಡಾಯ: ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯ ಅವಧಿಯಲ್ಲಿ ಹೊರಾಂಗಣ ಸಭೆಗಳು / ಚಟುವಟಿಕೆಗಳು ನಡೆಯುವ ಪ್ರದೇಶದಲ್ಲಿ, ಸಾರ್ವಜನಿಕರಿಗೆ ಬಿಸಿಲಿನಿಂದ ರಕ್ಷಣೆಯನ್ನು ನೀಡಲು ಅಗತ್ಯ ಶಾಮಿಯಾನ, ಪೆಂಡಾಲ್ ನ ವ್ಯವಸ್ಥೆ ಮಾಡಬೇಕು. ಸಭಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ತಿಳಿಸಿದೆ.
ಬಿಸಿ ಗಾಳಿಯ ಒತ್ತಡ ಹಾಗೂ ಬಿಸಿಗಾಳಿಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳಿಂದ ಎಲ್ಲರಿಗೂ ಅಪಾಯವಿದೆ. ಆದರೆ ನವಜಾತ ಶಿಶುಗಳು ಹಾಗೂ ಚಿಕ್ಕ ಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು, ಆರೋಗ್ಯ ಸಮಸ್ಯೆಗಳಿರುವವರು, ವಿಶೇಷವಾಗಿ ಹೃದ್ರೋಗ ಹಾಗೂ ರಕ್ತದ ಒತ್ತಡದಿಂದ ಬಳಲುತ್ತಿರುವವರಿಗೆ ಬಿಸಿಗಾಳಿ ಹೆಚ್ಚು ಸಮಸ್ಯೆಗಳನ್ನು ಉಂಟುಮಾಡಲಿದೆ.
ಪ್ರತ್ಯೇಕವಾಗಿ, ಒಂಟಿಯಾಗಿ ವಾಸಿಸುವ ವೃದ್ಧರು ಅಥವಾ ರೋಗಿಗಳ ಉಸ್ತುವಾರಿ ಹಾಗೂ ಅವರ ಆರೋಗ್ಯ ಸ್ಥಿತಿಯ ಮೇಲ್ವಿಚಾರಣೆಯನ್ನು ದೈನಂದಿನವಾಗಿ ಕೈಗೊಳ್ಳಬೇಕು. ಮನೆಯ ಒಳಾಂಗಣವನ್ನು ಕಿಟಕಿಗಳನ್ನು ತೆರೆದಿಡಬೇಕು. ತಣ್ಣಗಿರಿಸಲು ಪರದೆ, ಷಟರ್ ಗಳನ್ನು ಬಳಸಿ ಹಾಗೂ ರಾತ್ರಿಯ ಸಮಯದಲ್ಲಿ ಹಗಲು ಹೊತ್ತಿನಲ್ಲಿ ಮನೆಯ ಕೆಳಗಿನ ಮಹಡಿಗಳಲ್ಲಿರುವುದು ಉತ್ತಮ. ಶರೀರವನ್ನು ತಣ್ಣಗಿಡಲು ಫ್ಯಾನ್ ಅಥವಾ ತೇವವಾದ ಬಟ್ಟೆಯನ್ನು ಬಳಸಬಹುದು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಟೀ, ಕಾಫಿ ಮತ್ತು ಕಾರ್ಬೊನೇಟೆಡ್ ಪಾನೀಯ ಕುಡಿಯುವುದು ಉತ್ತಮವಲ್ಲ: ಮದ್ಯಪಾನ, ಟೀ, ಕಾಫಿ ಮತ್ತು ಕಾರ್ಬೊನೇಟೆಡ್ ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿದ ಪಾನೀಯಗಳಿಂದ ದೂರವಿರಬೇಕು, ಇಂತಹ ಪಾನೀಯಗಳು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ ಅಥವಾ ಹೊಟ್ಟೆ ನೋವನ್ನು ಉಂಟುಮಾಡುತ್ತವೆ. ಹೆಚ್ಚು ಪ್ರೊಟೀನ್ ಭರಿತವಾದ ಹಾಗೂ ಹಳೆಯದಾದ ಆಹಾರ ಪದಾರ್ಥಗಳನ್ನು ಸೇವಿಸಬಾರದು ಎಂದು ಹೇಳಿದೆ.
ಕಾರ್ಮಿಕರಿಗೆ ಸಲಹೆ: ಮಾಲಕರು ಕೆಲಸಗಾರರಿಗೆ ಕೆಲಸದ ಸ್ಥಳದಲ್ಲಿ ಕುಡಿಯಲು ತಣ್ಣನೆಯ ನೀರಿನ ವ್ಯವಸ್ಥೆ ಮಾಡಬೇಕು ಹಾಗೂ ಪ್ರತಿ 20 ನಿಮಿಷಗಳಿಗೊಮ್ಮೆ ಒಂದು ಗ್ಲಾಸ್ ಅಥವಾ ಅದಕ್ಕಿಂತ ಹೆಚ್ಚು ನೀರು ಕುಡಿಯುವಂತೆ ಗಮನ ವಹಿಸಬೇಕು.
ಕೆಲಸಗಾರರು ನೇರವಾದ ಸೂರ್ಯನ ಬೆಳಕಿನಲ್ಲಿ ಕೆಲಸ ನಿರ್ವಹಿಸದಂತೆ ಎಚ್ಚರ ವಹಿಸಬೇಕು. ಕೆಲಸಗಾರರಿಗೆ ನೆರಳಿನಲ್ಲಿ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ, ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಬಹುದು. ಶ್ರಮದಾಯಕ ಹಾಗೂ ಹೊರಾಂಗಣ ಚಟುವಟಿಕೆಗಳನ್ನು, ತಾಪಮಾನವು ಕಡಿಮೆ ಇರುವ ಸಮಯದಲ್ಲಿ ಅಂದರೆ, ಬೆಳಗಿನ ಅಥವಾ ಸಂಜೆಯ ಸಮಯದಲ್ಲಿ ನಿರ್ವಹಿಸುವಂತೆ ವೇಳಾಪಟ್ಟಿಯನ್ನು ಸಿದ್ಧಗೊಳಿಸಬೇಕು.
ಅತಿಯಾದ ಉಷ್ಣತೆಯಿಂದಾಗುವ ಸಮಸ್ಯೆಗಳು: ಅತಿಯಾದ ಉಷ್ಣತೆಯಿಂದ ಸಾಧಾರಣದಿಂದ ತೀವ್ರ ಜ್ವರ, ಕೈ-ಕಾಲುಗಳು ಹಾಗೂ ಮೊಣಕಾಲು ಊತ, ಉಷ್ಣತೆಯಿಂದ ಸೆಳೆತ, ಪ್ರಜ್ಞೆ ತಪ್ಪುವುದು, ಪಾಶ್ವವಾಯು ಉಂಟಾಗುತ್ತದೆ. ಅತಿಯಾದ ಉಷ್ಣತೆಯಿಂದಾಗಿ ಹೃದ್ರೋಗ ಸಮಸ್ಯೆಗಳು, ಉಸಿರಾಟದ ಸಮಸ್ಯೆಗಳು ಹಾಗೂ ಕಿಡ್ನಿ ಸಮಸ್ಯೆಗಳು ಅಧಿಕವಾಗುತ್ತವೆ.
‘ಯಾರಾದರೂ ಹೆಚ್ಚಿದ ದೇಹದ ಉಷ್ಣಾಂಶ ಹಾಗೂ ಪ್ರಜ್ಞೆ ತಪ್ಪುವುದು, ಗೊಂದಲದಲ್ಲಿದ್ದು, ಬೆವರುವಿಕೆಯು ಸ್ಥಗಿತವಾಗಿದ್ದರೆ, ತಕ್ಷಣವೇ 108/102ಗೆ ಕರೆ ಮಾಡಬಹುದು’ ಎಂದು ಆರೋಗ್ಯ ಇಲಾಖೆಯು ಹೇಳಿದೆ.