ರಾಜಕಾರಣ, ಧರ್ಮ ಕಲಹಗಳಿಂದ ಸರಕಾರಿ ಅಧಿಕಾರಿಗಳು ದೂರವಿರಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಆ.9: ಸರಕಾರಿ ಅಧಿಕಾರಿಗಳು, ಸಿಬ್ಬಂದಿಗಳು ಯಾವುದೇ ಕಾರಣಕ್ಕೂ ರಾಜಕಾರಣದಲ್ಲಿ ಅಥವಾ ಧರ್ಮ ಕಲಹಗಳಲ್ಲಿ ತೊಡಗಿಕೊಳ್ಳದೆ, ಇದರಿಂದ ದೂರವಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಬುಧವಾರ ವಿಧಾನಸೌಧ ಬಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ಆಡಳಿತ ಸೇವಾ ಅಧಿಕಾರಿಗಳ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಮತ್ತು ನವೀಕರಣ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
ಸರಕಾರದ ಅಧಿಕಾರಿ ಹಾಗೂ ನೌಕರರು ಬಡವರ ವಿರೋಧಿ, ಜನವಿರೋಧಿ, ಭ್ರಷ್ಟಾಚಾರದಲ್ಲಿ ತೊಡಗಬಾರದು. ಜಾತಿ, ಧರ್ಮಗಳ ಕಲಹದಲ್ಲಿಯೂ ಇರಬಾರದು. ಧರ್ಮಕ್ಕೂ, ಆಡಳಿತಕ್ಕೂ ಸಂಬಂಧವಿಲ್ಲ. ರಾಜಕಾರಣಿಗಳು ಕಾನೂನು ಹಾಗೂ ನೀತಿಗಳನ್ನು ನಿರೂಪಿಸಿದರೆ, ಅವುಗಳನ್ನು ಜಾರಿಗೊಳಿಸುವುದು ಅಧಿಕಾರಿಗಳು. ಅಧಿಕಾರಿಗಳು, ಜನರು ಮತ್ತು ಸರಕಾರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಾರೆ. ಅಧಿಕಾರಿಗಳು ಪ್ರಾಮಾಣಿಕವಾಗಿ, ಜನಪರವಾಗಿ ಕೆಲಸ ಮಾಡಿದರೆ ಸರಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದರು.
ಸಂವಿಧಾನವನ್ನು ರಕ್ಷಿಸಿದರೆ, ಸಂವಿಧಾನ ದೇಶವನ್ನು ರಕ್ಷಿಸುತ್ತದೆ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಒಬ್ಬ ವ್ಯಕ್ತಿ ಒಬ್ಬ ಮತ ಎಂದಿದೆ. ಆದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಈ ಸಮಾನತೆ ಇಲ್ಲ. ಹೀಗೆ ಮುಂದುವರೆದರೆ, ಅಸಮಾನತೆಗೆ ಒಳಗಾದ ಜನರು ಸ್ವಾತಂತ್ರ್ಯಸೌಧವನ್ನು ಧ್ವಂಸಗೊಳಿಸುವ ಸಾಧ್ಯತೆ ಇದೆ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ಇದು ಎಲ್ಲ ನಾಗರಿಕರ ಕರ್ತವ್ಯ. ಇದನ್ನು ಅರ್ಥಮಾಡಿಕೊಳ್ಳುವ ಮೂಲಕ ಸಮಾಜದಲ್ಲಿ ಸುಧಾರಣೆ ತರಬಹುದಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬ ಅಧಿಕಾರಿ ಸಂವಿಧಾನದ ಚೌಕಟ್ಟಿನೊಳಗೆ, ಸಂವಿಧಾನದ ಧ್ಯೇಯೋದ್ದೇಶಗಳನ್ನು ಅರಿತು ಕಾರ್ಯನಿರ್ವಹಿಸಬೇಕು. ವಿದ್ಯಾವಂತರಾದ ಅಧಿಕಾರಿಗಳು, ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಯನ್ನು ಕರ್ತವ್ಯ ನಿರ್ವಹಿಸುವ ಮೂಲಕ ಜಾತ್ಯಾತೀತ ಹಾಗೂ ಸಮಾನ ಸಮಾಜವನ್ನು ನಿರ್ಮಿಸಬಹುದಾಗಿದೆ. ಸರಕಾರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುವ ಶಪಥವನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದು ಕರೆ ನೀಡಿದರು.
ನಮ್ಮ ಸರಕಾರ ಐದು ಗ್ಯಾರಂಟಿಗಳ ಜಾರಿಗೊಳಿಸುವ ಭರವಸೆಯನ್ನು ನೀಡಿದೆ. ಈಗಾಗಲೇ 3 ಗ್ಯಾರಂಟಿ ಜಾರಿಯಾಗಿವೆ. ಆಗಸ್ಟ್ 24 ರಂದು 4ನೆ ಗ್ಯಾರಂಟಿ ಹಾಗೂ 5ನೆ ಗ್ಯಾರಂಟಿ ಡಿಸೆಂಬರ್ ಅಥವಾ ಜನವರಿ 2024ರಲ್ಲಿ ಜಾರಿಯಾಗುವ ಸಾಧ್ಯತೆ ಇದೆ. ಗ್ಯಾರಂಟಿ ಯೋಜನೆಗಳ ಯಶಸ್ಸು ಅಧಿಕಾರಿಗಳ ಮೇಲೆ ಅವಲಂಬಿತವಾಗಿದೆ. ಸ್ವಾತಂತ್ರ್ಯ ಭಾರತದ ಫಲವನ್ನು ಜನರಿಗೆ ತಲುಪಿಸುವ ಮೂಲಕ ಸಾಮಾಜಿಕ ಸುಧಾರಣೆಯನ್ನು ತರಬಹುದಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮಹಾತ್ಮಾ ಗಾಂಧಿಯವರು ಬ್ರಿಟೀಷರಿಗೆ ಅಂತಿಮ ಕರೆ ನೀಡಿದ ಕ್ವಿಟ್ ಇಂಡಿಯಾ ದಿನವನ್ನು ಇಂದು ಆಚರಣೆ ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕೆಂದು ಸಂಕಲ್ಪ ಮಾಡಬೇಕಾದ ದಿನ. ಅಧಿಕಾರಿಗಳಾಗಲಿ, ಜನರಾಗಲಿ, ಸಮಾಜ ನನಗೇನು ಮಾಡಿತು ಎನ್ನುವ ಬದಲು ಸಮಾಜಕ್ಕೆ ನನ್ನ ಕೊಡುಗೆ ಏನು ಎಂಬುದನ್ನು ಅರಿತುಕೊಳ್ಳಬೇಕು ಎಂದು ಅವರು ನುಡಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಕಂದಾಯ ಸಚಿವ ಕೃಷ್ಣಭೈರೇಗೌಡ, ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಡಾ.ಇ.ವಿ.ರಮಣರೆಡ್ಡಿ, ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ರವಿ ತಿರ್ಲಾಪೂರ ಸೇರಿದಂತೆ ಪ್ರಮುಖರಿದ್ದರು.
ʼಅರ್ಥಪೂರ್ಣ ಶತಮಾನೋತ್ಸವʼ
1919 ರಲ್ಲಿ ಸಂಘ ಅಸ್ತಿತ್ವ ಬಂದಿದ್ದು, ಇದಕ್ಕೆ ಸ್ಪೂರ್ತಿ ಒಬ್ಬ ಐರ್ಲೆಂಡ್ ಅಧಿಕಾರಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯನ್ನು ಸುವರ್ಣ ಯುಗ ಎನ್ನಲಾಗುತ್ತದೆ. ಅವರ ಕಾಲದಲ್ಲಿ ಆದಂತಹ ಅಭಿವೃದ್ಧಿ, ಸಾಮಾಜಿಕ ಕಾರ್ಯಗಳು, ಉದ್ದಿಮೆಗಳು ದೊಡ್ಡಮಟ್ಟದಲ್ಲಿ ಆಗಿತ್ತು. ಇದೇ ಅವಧಿಯಲ್ಲಿ ನಾಗರಿಕ ಸೇವೆ ಎಂಬ ಕಲ್ಪನೆಗೆ ಜೀವ ಬಂದಿತು. 1973 ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕಾರಣವಾಯಿತು. ಮೊದಲು ಮೈಸೂರು ಆಡಳಿತ ಸೇವೆ ಎಂದಿದ್ದು, ನಂತರ ಕರ್ನಾಟಕ ಆಡಳಿತ ಸೇವೆ ಎಂದು ಹೆಸರಿಸಲಾಯಿತು.ಈಗ ಅರ್ಥಪೂರ್ಣ ಶತಮಾನೋತ್ಸವ ನಡೆದಿದೆ ಎಂದು ಸಿದ್ದರಾಮಯ್ಯ ಶ್ಲಾಘಿಸಿದರು.