ರನ್ಯಾ ರಾವ್ ಚಿನ್ನ ಸಾಗಾಣಿಕೆ ಪ್ರಕರಣ: ಸಿಐಡಿ ತನಿಖೆಗೆ ತಡೆ; ಸ್ವಾಮೀಜಿಯ ನಂಟು..!

ರನ್ಯಾ ರಾವ್
ಬೆಂಗಳೂರು: ದುಬೈನಿಂದ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬಂಧನವಾಗಿರುವ ಪೊಲೀಸ್ ಅಧಿಕಾರಿ ಪುತ್ರಿ, ನಟಿ ರನ್ಯಾ ರಾವ್ ಜತೆಗೆ ಸ್ವಾಮೀಜಿವೊಬ್ಬರ ಸಂಪರ್ಕ ಹೊಂದಿರುವ ಮಾಹಿತಿ ಗೊತ್ತಾಗಿದ್ದು, ಈ ಸಂಬಂಧ ಡಿಆರ್ಐ ಹಾಗೂ ಸಿಬಿಐ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಇನ್ನೊಂದೆಡೆ, ಸಿಐಡಿ ತನಿಖೆಯನ್ನು ಕೈಬಿಡಲು ರಾಜ್ಯ ಸರಕಾರ ಮುಂದಾಗಿದೆ.
ಬೆಂಗಳೂರಿನ ಆರ್ಟಿನಗರದಲ್ಲಿರುವ ಸ್ವಾಮೀಜಿಯೊಬ್ಬರು ಸಹ ರನ್ಯಾಗೆ ನಿಕಟವರ್ತಿ ಎಂಬುದು ತನಿಖೆಯಿಂದ ಗೊತ್ತಾಗಿದ್ದು, ದುಬೈನಲ್ಲಿ ಕಚೇರಿ ತೆರೆದಿರುವ ಈ ಸ್ವಾಮೀಜಿ ಕ್ರಿಪ್ಟೋ ಕರೆನ್ಸಿ ಹಣ ವಿನಿಮಯ ಮಾಡುತ್ತಿದ್ದರು ಎಂಬುದು ಬಯಲಾಗಿದೆ. ಈ ಸ್ವಾಮೀಜಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಗಣ್ಯವ್ಯಕ್ತಿಗಳ ಜೊತೆ ನಿಕಟ ಸಂಪರ್ಕವಿಟ್ಟುಕೊಂಡಿರುವುದನ್ನು ಡಿಆರ್ಐ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ರನ್ಯಾ ಬಂಧನವಾದ ವೇಳೆ ಡಿಆರ್ಐ ಅಧಿಕಾರಿಗಳು ಆಕೆಯ ಮೊಬೈಲ್ ವಶಕ್ಕೆ ಪಡೆದು ಸಂಪರ್ಕ ಜಾಲದ ಬಗ್ಗೆ ಇಂಚಿಂಚು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಅದರಲ್ಲಿ ಖಾಕಿ, ಖಾದಿ ಮತ್ತು ಕಾವಿ ಹಾಗೂ ಗಣ್ಯವ್ಯಕ್ತಿಗಳ ದೂರವಾಣಿ ಸಂಖ್ಯೆಗಳು ಕಂಡುಬಂದಿವೆ. ಈಗಾಗಲೇ ಪಂಚತಾರ ಹೋಟೆಲ್ ಉದ್ಯಮಿಯೊಬ್ಬರ ಸಂಬಂಧಿ ತರುಣ್ನನ್ನು ಬಂಧಿಸಿರುವ ಡಿಆರ್ಐ ಅಧಿಕಾರಿಗಳು, ಈ ಪ್ರಕರಣದಲ್ಲಿ ಮತ್ತಷ್ಟು ಮಂದಿಯನ್ನು ಬಂಧಿಸಲು ತನಿಖೆ ಚುರುಕುಗೊಳಿಸಿದ್ದಾರೆ.
ಸಿಐಡಿ ತನಿಖೆ:
ಶಿಷ್ಟಾಚಾರ ಉಲ್ಲಂಘನೆಯ ಕುರಿತು ರಾಜ್ಯ ಸರಕಾರ ಹಿರಿಯ ಐಎಎಸ್ ಅಧಿಕಾರಿ ಗೌರವ್ಗುಪ್ತ ಅವರ ನೇತೃತ್ವದಲ್ಲಿ ವಿಚಾರಣೆಗೆ ಆದೇಶಿಸಿತ್ತು.ರನ್ಯಾರಾವ್ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಗಳಿಂದ ಲೋಪಗಳು ಆಗಿರುವ ಬಗ್ಗೆ ತನಿಖೆಗಾಗಿ ಸಿಐಡಿ ವಿಚಾರಣೆಗೂ ಆದೇಶಿಸಲಾಗಿತ್ತು. ಒಂದೇ ಪ್ರಕರಣದಲ್ಲಿ ಎರಡು ತನಿಖೆಗಳು ಸೂಕ್ತ ಅಲ್ಲ ಎಂಬ ಕಾರಣಕ್ಕಾಗಿ ಈಗ ಸಿಐಡಿ ವಿಚಾರಣೆಯನ್ನು ಸರಕಾರ ಹಿಂಪಡೆಯಲು ಮುಂದಾಗಿದೆ.
ಸಿಎಂ ಜತೆ ರನ್ಯಾ:
ರನ್ಯಾ ರಾವ್ ಅವರ ಮದುವೆಯ ಫೋಟೋದಲ್ಲಿ ಸಿಎಂ ಸಿದ್ದರಾಮಯ್ಯ, ರಾಜ್ಯ ಗೃಹ ಸಚಿವ ಡಾ.ಪರಮೇಶ್ವರ್ ಮತ್ತು ರನ್ಯಾ ಕುಟುಂಬದ ಸದಸ್ಯರು ಜೊತೆಯಾಗಿ ನಿಂತಿರುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾ.14ಕ್ಕೆ ಆದೇಶ:
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿರುವ ನಟಿ ರನ್ಯಾ ಜಾಮೀನು ಆದೇಶವನ್ನು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ಮಾ.14ಕ್ಕೆ ಕಾಯ್ದಿರಿಸಿದೆ.