ವರದಕ್ಷಿಣೆ ಕಿರುಕುಳ ಕಾನೂನು ದುರ್ಬಳಕೆ | ಭಾರತೀಯ ನ್ಯಾಯ ಸಂಹಿತೆ ಚರ್ಚೆಗೊಳಪಡಿಸಿ : ಜಿ.ಪರಮೇಶ್ವರ್
ಡಾ.ಜಿ.ಪರಮೇಶ್ವರ್
ಬೆಂಗಳೂರು: ವರದಕ್ಷಿಣೆ ಕಿರುಕುಳ ಕಾನೂನು ದುರ್ಬಳಕೆ ಕುರಿತು ಗಂಭೀರ ಆರೋಪಗಳು ಕೇಳಿಬಂದಿರುವ ಹಿನ್ನೆಲೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಭಾರತೀಯ ನ್ಯಾಯ ಸಂಹಿತೆ-2023 ಅನ್ನು ಒಮ್ಮೆ ಚರ್ಚೆಗೊಳಪಡಿಸಿ ಸರಿಪಡಿಸಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಹಾಗೂ ರಾಜ್ಯದಲ್ಲಿ ಜಾರಿಯಾಗಿರುವ ಭಾರತೀಯ ನ್ಯಾಯ ಸಂಹಿತೆ ಕಾನೂನಿನಲ್ಲಿಯೂ ಬದಲಾವಣೆ ಆಗಬೇಕಿದೆ ಎನ್ನುವ ಕೂಗು ಇದೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ಚರ್ಚೆ ನಡೆಸಲಾಗುವುದು ಎಂದರು.
ಇನ್ನೂ, ಪತ್ನಿ ಕಿರುಕುಳ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಟೆಕ್ಕಿ ಅತುಲ್ ಸುಭಾಷ್ ಪ್ರಕರಣದಲ್ಲಿ ಪತ್ನಿ ಸೇರಿ ಮೂವರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಜತೆಗೆ, ಈಗಾಗಲೇ ಡೆತ್ನೋಟ್ ಪಡೆದುಕೊಂಡಿದ್ದಾರೆ. ಮಹಿಳೆಯರಿಗಿರುವ ಕಾನೂನು ದುರ್ಬಳಕೆ ಆಗಿದೆ ಎಂಬುದೂ ಸೇರಿದಂತೆ ಅನೇಕ ವಿಚಾರಗಳನ್ನು ಡೆತ್ನೋಟ್ನಲ್ಲಿ ಅತುಲ್ ಬರೆದಿದ್ದಾರೆ.
ಕಾನೂನಿನಲ್ಲಿರುವ ಅಂಶಗಳು ಗಂಡಂದಿರಿಗೆ ತೊಂದರೆ ಆಗುತ್ತಿವೆ ಎಂಬುದು ಆರೋಪ. ಇದು ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಚರ್ಚೆಯಾಗುತ್ತಿದೆ. ಮಹಿಳೆಯರಿಗೆ ಕೊಟ್ಟಿರುವ ಹಕ್ಕು ದುರ್ಬಳಕೆ ಆಗುತ್ತಿದೆ ಎನ್ನುವ ಕೂಗು ಕೇಳಿ ಬಂದಿದೆ ಎಂದೂ ಅವರು ಉಲ್ಲೇಖಿಸಿದರು.
ಕೋವಿಡ್ ಹಗರಣ ಸಂಬಂಧ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿ, ಆ ಸಂದರ್ಭದಲ್ಲಿ ಕೋವಿಡ್ ಭ್ರಷ್ಟಾಚಾರ ಆಗಿರುವುದು ಸತ್ಯ. ಜಸ್ಟೀಸ್ ಮೈಕಲ್ ಡಿ ಕುನ್ಹಾ ಹೇಳಿದ್ದಾರೆ. ಕುನ್ಹಾ ಅವರು ವರದಿಯಲ್ಲಿ ಪ್ರತಿ ಸೆಕ್ಷನ್ ನೋಡಿದ್ದು, ಮಾಸ್ಕ್ ಕಿಟ್ ಖರೀದಿ, ಆಕ್ಸಿಜನ್, ಮೆಡಿಸಿನ್ ಎಲ್ಲವನ್ನೂ ಪ್ರತ್ಯೇಕವಾಗಿ ಪರಿಶೀಲಿಸಿದ್ದಾರೆ. ಅದರ ಆಧಾರದ ಮೇಲೆ ಇದೀಗ ಮೊಕಮದ್ದೆ ದಾಖಲಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುವುದು ಎಂದರು.