‘ಗೋಹತ್ಯೆ’ ಗಂಭೀರವಾಗಿ ಪರಿಗಣಿಸುವಂತೆ ಪೊಲೀಸರಿಗೆ ಸೂಚನೆ : ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು: ರಾಜ್ಯವ್ಯಾಪಿ ಗೋಹತ್ಯೆ ಅಕ್ರಮ ಪ್ರಕರಣ ಹೆಚ್ಚಳ ಕುರಿತು ಮಾಹಿತಿ ಕಲೆಹಾಕಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಹತ್ಯೆ ಅಕ್ರಮ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇದರ ವಿರುದ್ಧ ಕಾರ್ಯಾಚರಣೆ ನಡೆಸಿ ತಡೆಯುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಜತೆಗೆ, ರಾಜ್ಯದಲ್ಲಿ ಎಲ್ಲಲ್ಲಿ ಅಕ್ರಮ ಗೋಹತ್ಯೆ ಆಗಿದೆ ಎನ್ನುವ ಅಂಕಿಅಂಶಗಳನ್ನು ಕಲೆಹಾಕಲಾಗಿದೆ ಎಂದು ತಿಳಿಸಿದರು.
ಮೈಕ್ರೋ ಫೈನಾನ್ಸ್ ವಂಚನೆ ಪ್ರಕರಣಗಳ ಕುರಿತು ಪ್ರತಿಕ್ರಿಯಿಸಿ, ಗೃಹ ಇಲಾಖೆ ನಗದು ವಾಹಿವಾಟುಗಳಿಗೆ ನಿಷೇಧ ಹೇರಲು ಆಗುವುದಿಲ್ಲ.ಆದರೆ, ಹಣಕಾಸು ಇಲಾಖೆ ಇದಕ್ಕೆ ದಾರಿ ಹುಡುಕಬೇಕು. ಇನ್ನೊಂದೆಡೆ, ಬೀದರ್, ಮಂಗಳೂರು ದರೋಡೆ ಪ್ರಕರಣದ ಮಾಹಿತಿ ಕಲೆಹಾಕಲಾಗಿದ್ದು, ತಪ್ಪಿತಸ್ಥರನ್ನು ಬಂಧಿಸಿ ಕಾನೂನು ರೀತ್ಯಾ ಕ್ರಮ ಜರುಗಿಸುತ್ತೇವೆ ಎಂದರು.
.