ತಿರುಪತಿಗೆ ರವಾನೆಯಾಗುವ ನಂದಿನಿ ತುಪ್ಪ ಸಾಗಿಸುವ ಟ್ಯಾಂಕರ್ ಗಳಿಗೆ ಜಿಪಿಎಸ್ ಅಳವಡಿಕೆ
ತಿರುಪತಿ ದೇವಸ್ಥಾನ (Photo: PTI)
ಬೆಂಗಳೂರು: ತಿರುಪತಿಗೆ ರವಾನೆಯಾಗುವ ನಂದಿನಿ ತುಪ್ಪ ಸಾಗಿಸುವ ಟ್ಯಾಂಕರ್ ಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ತುಪ್ಪಕ್ಕೆ ಕಲಬೆರಕೆ ಆಗುವ ಸಾಧ್ಯತೆ ಇಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟಪಡಿಸಿದ್ದಾರೆ.
ರವಿವಾರ ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿರುಪತಿ ಲಡ್ಡುವಿಗೆ ಬಳಸುವ ತುಪ್ಪದಲ್ಲಿ ಕಲಬೆರಕೆ ಆರೋಪ ಬಂದ ಮೇಲೆ ಮತ್ತೆ ನಂದಿನಿ ತುಪ್ಪವನ್ನು ಕಳುಹಿಸುವಂತೆ ಟಿಟಿಡಿಯಿಂದ ಬೇಡಿಕೆ ಬಂದಿದೆ ಎಂದರು.
ಕೆಎಂಎಫ್ ಸಾಕಷ್ಟು ವಿಚಾರದಲ್ಲಿ ಹೆಸರು ಗಳಿಸಿದೆ. ನಂದಿನಿ ಬ್ರಾಂಡ್ ಸಮಸ್ತ ಕನ್ನಡಿಗರ ಗೌರವ ಹೆಚ್ಚಿಸಿದೆ. ನಾಲ್ಕು ವರ್ಷಗಳಿಂದ ತಿರುಮಲಕ್ಕೆ ಕೆಎಂಎಫ್ನ ಯಾವುದೇ ಉತ್ಪನ್ನವನ್ನೂ ಕಳುಹಿಸಿರಲಿಲ್ಲ ಎಂದು ಅವರು ಹೇಳಿದರು.
ನಮ್ಮಲ್ಲಿ ಸಾಕಷ್ಟು ಪ್ರಮಾಣದಲ್ಲಿ ತುಪ್ಪ ಸೇರಿದಂತೆ ಎಲ್ಲಾ ಉತ್ಪನ್ನಗಳೂ ಲಭ್ಯ ಇವೆ, ತಿರುಮಲದಿಂದ ಬರುವ ಬೇಡಿಕೆಯನ್ನೂ ತುಪ್ಪವನ್ನು ರವಾನಿಸಬಹುದಾಗಿದೆ. ಹಾಗೆಯೇ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ನಂದಿನಿ ತುಪ್ಪವನ್ನೇ ಬಳಸಬೇಕೆಂದು ಸರಕಾರ ಆದೇಶ ಹೊರಡಿಸಿದ್ದು, ಅವುಗಳಿಗೆ ಪೂರೈಸುವಷ್ಟು ತುಪ್ಪ ನಮ್ಮಲ್ಲಿದೆ ಎಂದರು.