ಮೇ 25ಕ್ಕೆ ರಾಜ್ಯದ 265 ಗ್ರಾ.ಪಂ.ಸ್ಥಾನಗಳಿಗೆ ಉಪಚುನಾವಣೆ
ಸಾಂದರ್ಭಿಕ ಚಿತ್ರ | PTI
ಬೆಂಗಳೂರು : ರಾಜ್ಯದ 135 ತಾಲೂಕುಗಳ 223 ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿದ್ದ ಒಟ್ಟು 265 ಸದಸ್ಯ ಸ್ಥಾನಗಳಿಗೆ ಮೇ 25ಕ್ಕೆ ಉಪಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ.
ಶುಕ್ರವಾರ ಆಯೋಗದ ಅಧೀನ ಕಾರ್ಯದರ್ಶಿ ಚುನಾವಣಾ ಪ್ರಕಟಣೆ ಹೊರಡಿಸಿದ್ದು, ಮೇ 8ಕ್ಕೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಉಪಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ(ಮೇ 8) ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಸಲು ಮೇ 14 ಕೊನೆಯ ದಿನವಾಗಿದ್ದು, ಮೇ 15ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ.
ಉಮೇದುವಾರಿಕೆ ಹಿಂಪಡೆಯಲು ಮೇ 17ರಂದು ಕೊನೆಯ ದಿನ. ಮೇ 25ರ ಬೆಳಗ್ಗೆ 7ಗಂಟೆಯಿಂದ ಸಂಜೆ 5ಗಂಟೆಯ ವರೆಗೆ ಮತದಾನ ನಡೆಯಲಿದೆ. ಮೇ 28ಕ್ಕೆ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಿಸುವ ಸಾಧ್ಯತೆಗಳಿವೆ. ಮೇ 8ರಿಂದ ಮೇ 28ರ ವರೆಗೆ ಉಪಚುನಾವಣೆ ನಡೆಯಲಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದು ತಿಳಿಸಲಾಗಿದೆ.
ಮೇ 11ಕ್ಕೆ ನಿಗದಿಯಾಗಿದ್ದ ಗ್ರಾ.ಪಂ. ಉಪಚುನಾವಣೆಯನ್ನು ಸರಕಾರ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಎ.24ರಂದು ಹಮ್ಮಿಕೊಂಡಿದ್ದ ವಿಶೇಷ ಸಂಪುಟ ಸಭೆ ಹಾಗೂ ಚುನಾವಣಾ ಸಿದ್ದತೆಗೆ ಕಾಲಾವಕಾಶ ಅಗತ್ಯವಿರುವ ಹಿನ್ನೆಲೆಯಲ್ಲಿ ಮುಂದೂಡಿಕೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ದಿನಾಂಕ ನಿಗದಿಪಡಿಸಲಾಗಿದೆ.