ಸ್ಪೀಕರ್ ಯು ಟಿ ಖಾದರ್ಗೆ ಗ್ರೇಟ್ ಸನ್ ಆಫ್ ಇಂಡಿಯಾ ಅವಾರ್ಡ್
ನ್ಯಾ. ಗೋಪಾಲ್ ಗೌಡ ಅಧ್ಯಕ್ಷತೆಯ ಇಂಡಿಯನ್ ಕಾನ್ಫರೆನ್ಸ್ ಆಫ್ ಇಂಟೆಲೆಕ್ಚುವಲ್ಸ್ ನಿಂದ ಪ್ರಶಸ್ತಿ
ಸ್ಪೀಕರ್ ಯು ಟಿ ಖಾದರ್
ಬೆಂಗಳೂರು, ಜು. 15: ಸ್ಪೀಕರ್ ಯು ಟಿ ಖಾದರ್ ಅವರಿಗೆ ಒಡಿಶಾ ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಾಧೀಶ ಹಾಗು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾ. ಗೋಪಾಲ್ ಗೌಡ ಅಧ್ಯಕ್ಷತೆಯ ಇಂಡಿಯನ್ ಕಾನ್ಫರೆನ್ಸ್ ಆಫ್ ಇಂಟೆಲೆಕ್ಚುವಲ್ಸ್ ಸಂಸ್ಥೆಯಿಂದ ಗ್ರೇಟ್ ಸನ್ ಆಫ್ ಇಂಡಿಯಾ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.
ರವಿವಾರ ದಿಲ್ಲಿಯ ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ನ್ಯಾ. ಗೋಪಾಲ್ ಗೌಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಛತ್ತೀಸ್ ಗಢದ ರಾಜ್ಯಪಾಲ ಬಿಸ್ವ ಭೂಷಣ್ ಹರಿಚರಣ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅವರ ಆತ್ಮಕತೆ 'ಬ್ಯಾಟಲ್ ನಾಟ್ ಓವರ್' ಕೃತಿಯ ಇಂಗ್ಲೀಷ್ ಅನುವಾದವೂ ಅದೇ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ದೇಶದ ಹಿರಿಯ ನ್ಯಾಯಾಧೀಶರುಗಳು ಹಾಗು ಅಧಿಕಾರಿಗಳು ಇಂಡಿಯನ್ ಕಾನ್ಫರೆನ್ಸ್ ಆಫ್ ಇಂಟೆಲೆಕ್ಚುವಲ್ಸ್ ನ ಪದಾಧಿಕಾರಿಗಳು, ಸದಸ್ಯರು ಹಾಗು ಪೋಷಕರಾಗಿದ್ದು ಆ ಸಂಸ್ಥೆಯಿಂದ ನೀಡಲಾಗುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಈ ಹಿಂದೆ ಹಲವು ಖ್ಯಾತ ನ್ಯಾಯಾಧೀಶರು, ಕಲಾವಿದರು, ಉದ್ಯಮಿಗಳು, ವಿಜ್ಞಾನಿಗಳು ಮತ್ತಿತರ ಹಿರಿಯ ಸಾಧಕರಿಗೆ ಹಾಗು ಬುದ್ಧಿಜೀವಿಗಳಿಗೆ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.