ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಜೊತೆ ಗ್ರೀಸ್ ನಿಯೋಗ ಚರ್ಚೆ
ಕರಾವಳಿಯಲ್ಲಿ ಬಂದರು, ಲಾಜಿಸ್ಟಿಕ್ ವಲಯ ನಿರ್ಮಾಣ: ಗ್ರೀಸ್ ಸಹಭಾಗಿತ್ವಕ್ಕೆ ಆಹ್ವಾನ
ಬೆಂಗಳೂರು: ಗ್ರೀಸ್ ದೇಶವು ಹಡಗು ನಿರ್ಮಾಣ ಮತ್ತು ಸಾಗರಮಾರ್ಗ ವಹಿವಾಟಿನಲ್ಲಿ ಪರಿಣತಿ ಹೊಂದಿದ್ದು, ನಮ್ಮ ರಾಜ್ಯದ ಕರಾವಳಿ ತೀರದಲ್ಲಿ ಆಧುನಿಕ ಬಂದರು ಮತ್ತು ಸರಕು ಸಾಗಣೆ ತಾಣಗಳ (ಲಾಜಿಸ್ಟಿಕ್ ವಲಯ) ಅಭಿವೃದ್ಧಿ ನಿಟ್ಟಿನಲ್ಲಿ ಆ ದೇಶದೊಂದಿಗೆ ಸಹಭಾಗಿತ್ವಕ್ಕೆ ಆಸಕ್ತಿ ಹೊಂದಿರುವುದಾಗಿ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಶುಕ್ರವಾರ ಹೇಳಿದರು.
ಖನಿಜ ಭವನದಲ್ಲಿ ತಮ್ಮನ್ನು ಭೇಟಿಯಾದ ಗ್ರೀಸ್ ದೇಶದ ಉಪವಿದೇಶಾಂಗ ಸಚಿವ ಕೋಸ್ಟಾಸ್ ಫ್ರಾಗ್ಕೋಜಿಯಾನಿಸ್ ನೇತೃತ್ವದ ಉನ್ನತ ಮಟ್ಟದ ನಿಯೋಗದೊಂದಿಗೆ ಮಾತುಕತೆ ನಡೆಸಿದ ಅವರು ರಾಜ್ಯ ಸರಕಾರ ಜಾರಿಗೆ ತಂದಿರುವ ಗೋದಾಮು ಮತ್ತು ಸಾಗಣೆ ವ್ಯವಸ್ಥಾಪನೆ ನೀತಿ ಇದಕ್ಕೆ ಪೂರಕವಾಗಿದೆ ಎಂದು ಗಮನ ಸೆಳೆದರು.
ಗ್ರೀಸ್ ದೇಶವು ಕೃಷಿ ಆಧಾರಿತ ಉದ್ದಿಮೆಗಳು ಮತ್ತು ಆಹಾರ ಸಂಸ್ಕರಣೆ ಕ್ಷೇತ್ರಗಳಲ್ಲಿ ಕೂಡ ಮುಂಚೂಣಿಯಲ್ಲಿದೆ. ಹೀಗಾಗಿ, ನಾವು ಆಲಿವ್ ಬೆಳೆಗಾರಿಕೆ, ಫೆಟಾ ಗಿಣ್ಣು ಉತ್ಪಾದನೆ, ಮೆಡಿಟರೇನಿಯನ್ ವಲಯದ ಆಹಾರ ಸಂಸ್ಕರಣಾ ತಂತ್ರಗಳನ್ನು ಅವರೊಂದಿಗಿನ ಸಹಭಾಗಿತ್ವದ ಮೂಲಕ ಕಲಿಯಲು ಉತ್ಸುಕರಾಗಿದ್ದೇವೆ ಎಂದು ಅವರು ವಿವರಿಸಿದರು.
ವಿಜಯಪುರದಲ್ಲಿ ಸದ್ಯದಲ್ಲೇ ಸ್ಥಾಪನೆಯಾಗಲಿರುವ ಫುಡ್ ಪಾರ್ಕ್ ಬಗ್ಗೆ ಪ್ರಸ್ತಾಪಿಸಿ, ಇಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಪರಿಶೀಲಿಸಬೇಕು ಎಂದು ಗ್ರೀಕ್ ನಿಯೋಗದ ಗಮನ ಸೆಳೆದರು.
ರಾಜ್ಯವು ಪ್ರವಾಸೋದ್ಯಮ, ಪಾರಂಪರಿಕ ತಾಣಗಳ ಅಭಿವೃದ್ಧಿ, ಕರಾವಳಿ ಪ್ರವಾಸೋದ್ಯಮ, ವೆಲ್ನೆಸ್ ರಿಟ್ರೀಟ್ ಮುಂತಾದ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ಕೊಡಲಿದೆ. ಜತೆಗೆ ವಿದ್ಯುತ್ ಚಾಲಿತ ವಾಹನ, ಮರುಬಳಕೆ ಇಂಧನ, ಸೌರಶಕ್ತಿ, ಹೈಡ್ರೋಜನ್ ಉತ್ಪಾದನೆ, ಹಸಿರು ಅಮೋನಿಯಾ ಮುಂತಾದ ವಲಯಗಳ ಬಗ್ಗೆಯೂ ಗಮನ ಕೇಂದ್ರೀಕರಿಸಲಿದೆ. ಈ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದಕ್ಕೂ ಗ್ರೀಸ್ ವಿದೇಶಕ್ಕೆ ಒಳ್ಳೆಯ ಅವಕಾಶಗಳಿವೆ ಎಂದು ಪಾಟೀಲ ವಿವರಿಸಿದರು.
ಇದಕ್ಕೆ ಸ್ಪಂದಿಸಿದ ಗ್ರೀಸ್ ಉಪವಿದೇಶಾಂಗ ಸಚಿವರು, ದುಬಾರಿ ವೆಚ್ಚದ ಸಿನಿಮಾಗಳ ತಯಾರಿಕೆಗೆ ಹೆಸರಾಗಿರುವ ಕರ್ನಾಟಕದ ಚಿತ್ರರಂಗವು ಗ್ರೀಸ್ ದೇಶಕ್ಕೆ ಬಂದು ಚಿತ್ರೀಕರಣ ಮಾಡುವ ಮೂಲಕ ಅಲ್ಲಿನ ಪ್ರೋತ್ಸಾಹಕ ನೀತಿಗಳ ಪ್ರಯೋಜನ ಪಡೆಯಬೇಕು. ಜತೆಗೆ, ವಿದೇಶಗಳಿಗೆ ಪ್ರವಾಸ ಕೈಗೊಳ್ಳುವ ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗ್ರೀಸ್ ಗೆ ಭೇಟಿ ನೀಡಬೇಕು. ಈ ಸಂಬಂಧ ಪ್ರವಾಸ ಆಯೋಜಕರ ಜತೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಭಾರತದಿಂದ, ಅದರಲ್ಲೂ ಬೆಂಗಳೂರಿನಿಂದ ಗ್ರೀಸ್ ನ ಅಥೆನ್ಸ್ ಗೆ ನೇರ ವಿಮಾನ ಸಂಚಾರ ಆರಂಭಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಇದ್ದರು.