ಕರಿದ ‘ಹಸಿರು ಬಟಾಣಿ’ಗಳ ಮಾದರಿಗಳಲ್ಲಿ ಬಹುತೇಕ ಅಸುರಕ್ಷಿತ; ಸಿಎಂ ವಿಶೇಷ ಅಧಿಕಾರಿಗೆ ಅನುಪಾಲನ ವರದಿ ಸಲ್ಲಿಕೆ

ಸಾಂದರ್ಭಿಕ ಚಿತ್ರ
ಬೆಂಗಳೂರು : ರಾಜ್ಯದಲ್ಲಿ ಮಾರಾಟವಾಗುತ್ತಿರುವ ಕರಿದ ಹಸಿರು ಬಟಾಣಿಗಳ ಮಾದರಿಗಳನ್ನು ಪ್ರಯೋಗಾಲಯದಲ್ಲಿ ವಿಶ್ಲೇಷಣೆ ಮಾಡಿದ್ದು, ಬಹುತೇಕ ಮಾದರಿಗಳು ಅಸುರಕ್ಷಿತವಾಗಿವೆ. ಹೀಗಾಗಿ ಮುಂದಿನ ಕ್ರಮ ಕೈಗೊಳ್ಳುವಂತೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರು, ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿಗೆ ಅನುಪಾಲನ ವರದಿ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿಗೆ ಪತ್ರ ಬರೆದಿರುವ ಅವರು, ರಾಜ್ಯಾದ್ಯಂತ ಇದುವರೆಗೆ 114 ಕರಿದ ಹಸಿರು ಬಟಾಣಿಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದ್ದು, ಈಗಾಗಲೇ 96 ಮಾದರಿಗಳನ್ನು ವಿಶ್ಲೇಷಣೆಗೊಳಪಡಿಸಲಾಗಿದೆ. 64 ಮಾದರಿಗಳು ಕೃತಕ ಬಣ್ಣವಾದ ಟಾರ್ಟೈಝನ್ ಬಣ್ಣದ ಬಳಕೆಯಿಂದಾಗಿ ಅಸುರಕ್ಷಿತ ಎಂದು ವರದಿಯಾಗಿದೆ ಎಂದಿದ್ದಾರೆ.
32 ಮಾದರಿಗಳು ಸುರಕ್ಷಿತ ಎಂದು ವರದಿಯಾಗಿದೆ. ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ. ಪ್ರಯೋಗಾಲಯದ ವಿಶ್ಲೇಷಣಾ ವರದಿಗಳ ಆಧಾರದಲ್ಲಿ ಮುಂದಿನ ಕಾನೂನಾತ್ಮಕ ಕ್ರಮ ಜರುಗಿಸಲಾಗುತ್ತದೆ ಎಂಬ ಮಾಹಿತಿಯನ್ನು ತಮ್ಮ ಅವಗಾಹನೆಗಾಗಿ ಮತ್ತು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರು ಪತ್ರದಲ್ಲಿ ತಿಳಿಸಿದ್ದಾರೆ.