ʼಗೃಹ ಲಕ್ಷ್ಮಿʼ ಹೊಸ ನೋಂದಣಿ ಸ್ಥಗಿತಗೊಂಡಿಲ್ಲ; ತಪ್ಪು ಮಾಹಿತಿ ನೀಡಿದ ಇಲಾಖೆಯ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಲಕ್ಷ್ಮಿ ಹೆಬ್ಬಾಳ್ಕರ್
ಬೆಂಗಳೂರು: ʼʼಗೃಹ ಲಕ್ಷ್ಮಿ ಯೋಜನೆ ಹೊಸ ನೋಂದಣಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಟ್ವಿಟರ್ ಖಾತೆಯಲ್ಲಿ ತಪ್ಪು ಮಾಹಿತಿ ನೀಡಲಾಗಿದೆ. ಅದು ಇಲಾಖೆಯ ಸಿಬ್ಬಂದಿಯ ಅಚಾತುರ್ಯದಿಂದ ನಡೆದಿದೆʼʼ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಇದೊಂದು ಗಂಭೀರ ವಿಚಾರ. ನಮ್ಮ ಇಲಾಖೆಯ ಅಧಿಕೃತ ಟ್ವಿಟರ್ ಖಾತೆಯಿಂದ ಯಾರು ಈ ಮಾಹಿತಿಯನ್ನು ನೀಡಿದ್ದಾರೋ, ಅವರಿಗೆ ನೋಟಿಸ್ ನೀಡುತ್ತೇನೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ. ಈ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆʼʼ ಎಂದು ತಿಳಿಸಿದರು.
ʼʼಗೃಹಲಕ್ಷ್ಮೀ ನಿರಂತರವಾಗಿ ನಡೆಯುವ ಯೋಜನೆʼʼ
ನಮ್ಮ ಇಲಾಖೆಯಿಂದ ಈಗಾಗಲೇ ಹಣ ವರ್ಗಾವಣೆ ಆಗಿದೆ. ಬ್ಯಾಂಕ್ನಿಂದ ಮಾತ್ರ ಹಣ ಸ್ಲೋ ಆಗಿದೆ. ಇನ್ನು ನಾಲ್ಕೈದು ದಿನಗಳಲ್ಲಿ ಎಲ್ಲರಿಗೂ ಹಣ ವರ್ಗಾವಣೆ ಆಗುತ್ತೆ. ನಿಧಾನವಾಗಿ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಕ್ರಿಯೆ ಆಗುತ್ತಿದೆ. ಫಲಾನುಭವಿಗಳಿಗೆ ನಮ್ಮ ಇಲಾಖೆಯಿಂದ ಹಣ ಕಳುಹಿಸುತ್ತಿದ್ದೇವೆ. ಹೊಸದಾಗಿ ನೋಂದಣಿ ಮಾಡಿಕೊಂಡವರಿಗೂ ಲಾಭ ಸಿಗುತ್ತಿದೆ. ಅದು ಸ್ಥಗಿತಗೊಳ್ಳಲ್ಲ. ಗೃಹಲಕ್ಷ್ಮೀ ನಿರಂತರವಾಗಿ ನಡೆಯುವ ಯೋಜನೆ ಎಂದು ಸಚಿವರು ತಿಳಿಸಿದರು.
ಟ್ವೀಟ್ ಮಾಡಿ ಡಿಲಿಟ್ ಮಾಡಿದ ಇಲಾಖೆ
ಹೊಸ ನೋಂದಣಿಯನ್ನು ಸ್ಥಗಿತಗೊಳಿಸಿರುವ ಕುರಿತ ಟ್ವೀಟ್ ಅನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೆಲವೇ ಗಂಟೆಗಳಲ್ಲಿ ಡಿಲಿಟ್ ಮಾಡಿತ್ತು. ಇದೀಗ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಇಲಾಖೆಯ ವಿರುದ್ಧ ಅಸಮಾಧಾನ
ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ತಪ್ಪು ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ವಿರುದ್ಧ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗುತ್ತಿದೆ.