ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಎಚ್.ವಿಶ್ವನಾಥ್ ಇಂಗಿತ
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದಲೇ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸುತ್ತಿದ್ದೇನೆ ಎಂದು ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಟೆಕ್ನಿಕಲಿ ಬಿಜೆಪಿ, ಮೆಂಟಲಿ ಕಾಂಗ್ರೆಸ್ಸಿಗ. ಹಾಗಾಗಿ ಮಾನಸಿಕ ನಿರ್ಧಾರದ ಜೊತೆ ಹೋಗಲು ನಿರ್ಧರಿಸಿದ್ದೇನೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಟ್ಟರೆ ಸ್ಪರ್ಧಿಸುತೇನೆ. ಇಲ್ಲದಿದ್ರೆ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದರು.
ನನಗೂ ಪಾರ್ಲಿಮೆಂಟ್ ಸದಸ್ಯನಾಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಇದೆ. ಬೇರೆ ಬೇರೆ ಇಲಾಖೆಗಳಲ್ಲಿ ಮಂತ್ರಿ ಸ್ಥಾನ ನಿಭಾಯಿಸಿದ್ದೇನೆ. ನಾನು ಮಾಡಿದ ಯೋಜನೆಗಳು ಈಗಲೂ ಮುಂದುವರಿದಿವೆ. ನಾನು ಮಾಡಿದ ಸೇವೆಯನ್ನು ಗುರುತಿಸಿ ಅವಕಾಶ ಕೊಡಿ ಎಂದು ಕೇಳಿದ್ದೇನೆ ಎಂದರು.
ಸಂಸದ ಪತ್ರಾಪ್ ಸಿಂಹ ಸಹೋದರನ ಪರ ಹೆಚ್‍ಡಿಕೆ ಸುದ್ದಿಗೋಷ್ಠಿ ನಡೆಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆದವರು ಮರಗಳ್ಳನ ಪರವಾಗಿ ವಕಾಲತ್ತು ವಹಿಸಿದರೆ ಹೇಗೆ? 156 ಮರ ಕಡಿದು ಪರಿಸರ ನಾಶ ಮಾಡಿದವನ ಪರವಾಗಿ ಮಾತನಾಡುವುದು ಎಷ್ಟು ಸರಿ? ಪರಿಸರ ವಿರೋಧಿಯ ಪರವಾಗಿ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.