ಎಚ್.ವಿಶ್ವನಾಥ್ ಓರ್ವ ಬ್ಲಾಕ್‍ಮೇಲರ್-ರೋಲ್‍ಕಾಲರ್ : ಸಚಿವ ಭೈರತಿ ಸುರೇಶ್ ವಾಗ್ದಾಳಿ
ಬೆಂಗಳೂರು : ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಓರ್ವ ಬ್ಲಾಕ್‍ಮೇಲರ್ ಹಾಗೂ ರೋಲ್‍ಕಾಲರ್. ಆತನಿಗೆ ಎಕರೆಗಟ್ಟಲೆ ಸಿಎ ನಿವೇಶನ ಮಂಜೂರು ಮಾಡಲು ನಿರಾಕರಿಸಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಕುಟುಂಬ ಹಾಗೂ ನನ್ನ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾನೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ವಾಗ್ದಾಳಿ ನಡೆಸಿದರು.
ಶುಕ್ರವಾರ ವಿಧಾನಸೌಧದಲ್ಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಶ್ವನಾಥ್‍ಗೆ ಬುದ್ಧಿಭ್ರಮಣೆ ಆಗಿದೆ. ಆತನಿಗೆ ನಿಮ್ಹಾನ್ಸ್ ನಲ್ಲಿ ಸೂಕ್ತ ಚಿಕಿತ್ಸೆಯ ಅಗತ್ಯವಿದೆ. ನನ್ನ ಮುತ್ತಾತ 1942ರಲ್ಲಿ ಹೆಣ್ಣೂರು ಮುಖ್ಯರಸ್ತೆಯಲ್ಲಿ ಖರೀದಿಸಿದ ಆಸ್ತಿ ಪಿತ್ರಾರ್ಜಿತವಾಗಿ ನನಗೆ ಹಾಗೂ ನನ್ನ ದೊಡ್ಡಪ್ಪನವರ ಮಗ ತ್ಯಾಗರಾಜ್ ಅವರಿಗೆ ಬಂದಿದೆ ಎಂದು ಹೇಳಿದರು.
ಆ ಆಸ್ತಿಯಲ್ಲಿ ನಾವು ಹೊಟೇಲ್, ರೆಸ್ಟೋರೆಂಟ್, ಪೆಟ್ರೋಲ್ ಬಂಕ್, ವಾಣಿಜ್ಯ ಸಂಕೀರ್ಣ ಎಲ್ಲವನ್ನೂ ಕಟ್ಟಿದ್ದೇವೆ. ನಾನು ರಾಜಕಾರಣಕ್ಕೆ ಬರುವ ಮುನ್ನವೇ ಆ ಆಸ್ತಿಯನ್ನು ಅಭಿವೃದ್ಧಿ ಮಾಡಲಾಗಿದೆ. ಅದಕ್ಕೂ ಸಿದ್ದರಾಮಯ್ಯನವರಿಗೂ ಏನು ಸಂಬಂಧ? ಸಿದ್ದರಾಮಯ್ಯ ಅವರ ಸೊಸೆಗೆ ಏನು ಸಂಬಂಧ? ಎಂದು ಪ್ರಶ್ನಿಸಿದ ಅವರು, ವಿಶ್ವನಾಥ್ ಈ ಕೂಡಲೆ ಬಹಿರಂಗವಾಗಿ ಸಿದ್ದರಾಮಯ್ಯ, ಅವರ ಸೊಸೆ ಹಾಗೂ ನನಗೆ ಕ್ಷಮೆ ಕೋರಬೇಕು. ಇಲ್ಲದಿದ್ದರೆ, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಸುರೇಶ್ ಎಚ್ಚರಿಕೆ ನೀಡಿದರು.
ಈಗಾಗಲೆ ಆತನ ವಿರುದ್ಧ ಒಂದು ಕ್ರಿಮಿನಲ್ ಕೇಸ್, ಒಂದು ಸಿವಿಲ್ ಸೂಟ್ ಹಾಗೂ 50 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ನ್ಯಾಯಾಲಯವು ಇಂತಹ ಹೇಳಿಕೆಗಳನ್ನು ನೀಡಬಾರದು ಎಂದು ಆತನಿಗೆ ಸೂಚಿಸಿದ್ದರೂ ತನ್ನ ವರಸೆಯನ್ನು ಬದಲಿಸಿಕೊಳ್ಳುತ್ತಿಲ್ಲ. ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನಿಗೆ ಇರುವಷ್ಟು ಕನಿಷ್ಠ ಪರಿಜ್ಞಾನ, ಸೌಜನ್ಯವೂ ಆತನಿಗೆ ಇಲ್ಲ ಎಂದು ಅವರು ಕಿಡಿಗಾರಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧದ ಪ್ರಕರಣಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಅವರ ಅಧಿಕಾರ ಅವಧಿಯಲ್ಲಿ ನಡೆದಿರುವ ಅಕ್ರಮಗಳು, ದಾಖಲಾಗಿರುವ ಪ್ರಕರಣಗಳು ಎಲ್ಲವನ್ನು ದಾಖಲೆ ಸಮೇತ ಜನರ ಮುಂದಿಡುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಿದ್ದ ಬೆಂಗಳೂರು ಉತ್ತರ ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಅವರಿಗೆ ಹೆಚ್ಚು ಮತಗಳು ಸಿಕ್ಕಿದವು. ಆದರೆ, ನಾನು ಪ್ರತಿನಿಧಿಸುತ್ತಿರುವ ಹೆಬ್ಬಾಳದಲ್ಲಿ ಮಾತ್ರ ಅವರಿಗೆ ಹೆಚ್ಚು ಮತಗಳು ಸಿಕ್ಕಿಲ್ಲ. ಆದುದರಿಂದ, ನನ್ನ ವಿರುದ್ಧ ಇಲ್ಲಸಲ್ಲದ ಆಪಾದನೆಗಳನ್ನು ಮಾಡುತ್ತಿದ್ದಾರೆ ಎಂದು ಸುರೇಶ್ ಹೇಳಿದರು.
ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲ ವರ್ಗಗಳ ನಾಯಕರಾಗಿರುವ ಸಿದ್ದರಾಮಯ್ಯನವರ ರಾಜಕೀಯ ಏಳಿಗೆಯನ್ನು ಸಹಿಸಿಕೊಳ್ಳಲು ವಿಶ್ವನಾಥ್‍ಗೆ ಆಗುತ್ತಿಲ್ಲ. ಆದುದರಿಂದ, ಹುರುಳೆ ಇಲ್ಲದ ಮುಡಾ ಸೇರಿದಂತೆ ಇನ್ನಿತರ ಹಗರಣಗಳನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಉಲ್ಲೇಖಿಸುತ್ತಿದ್ದಾರೆ ಎಂದು ತಿಳಿಸಿದರು.
ವಿಶ್ವನಾಥ್‍ಗೆ ಬಹಳ ಹಿಂದೆಯೇ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಕೊಡಿಸಬೇಕಿತ್ತು. ಕ್ಷುಲ್ಲಕ ಕಾರಣಕ್ಕಾಗಿ ಸಿದ್ದರಾಮಯ್ಯ ಕುಟುಂಬದ ಹೆಣ್ಣು ಮಕ್ಕಳ ಹೆಸರನ್ನು ಬಳಕೆ ಮಾಡುತ್ತಿದ್ದಾರೆ. ಮುಡಾ ಪ್ರಕರಣವನ್ನು ಹಗರಣ ಎಂದು ಬಿಂಬಿಸುತ್ತಿರುವ ವಿಪಕ್ಷಗಳು, ತಾವು ಅಧಿಕಾರದಲ್ಲಿದ್ದಾಗ ಈ ಬಗ್ಗೆ ಏಕೆ ಗಮನ ಹರಿಸಲಿಲ್ಲ. ಕೇಂದ್ರ ಸಚಿವರಾದ ಕುಮಾರಸ್ವಾಮಿ ಹಾಗೂ ಅಮಿತ್ ಶಾ ರಾಜ್ಯ ಸರಕಾರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಏನೆಲ್ಲ ಅಕ್ರಮಗಳು ನಡೆದಿವೆಯೋ ಅವುಗಳ ಮಾಹಿತಿಯನ್ನು ಕಲೆ ಹಾಕಿ ಜನರ ಮುಂದಿಡುತ್ತೇವೆ ಎಂದು ನಾರಾಯಣಸ್ವಾಮಿ ಹೇಳಿದರು. ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಉಪಸ್ಥಿತರಿದ್ದರು.