ಹಜ್ ಭವನದಲ್ಲಿ ಅಗ್ನಿ ಅವಘಡ ಪ್ರಕರಣ: 4 ಕೋಟಿ ರೂ. ನಷ್ಟ, ತನಿಖೆಗೆ ಸಮಿತಿ ರಚನೆ: ಸಚಿವ ರಹೀಂ ಖಾನ್
ಬೆಂಗಳೂರು, ಅ.30: ಹಜ್ ಭವನದ ಎರಡನೆ ಹಾಗೂ ಮೂರನೆ ಮಹಡಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸಮ್ಮೇಳನ ಸಭಾಂಗಣ(ಆಡಿಟೋರಿಯಂ)ದಲ್ಲಿ ಶನಿವಾರ ಸಂಜೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಸಂಭವಿಸಿದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಮಿತಿ ರಚನೆ ಮಾಡಲಾಗಿದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ತಿಳಿಸಿದ್ದಾರೆ.
ಸೋಮವಾರ ಹೆಗಡೆ ನಗರ ಸಮೀಪದ ತಿರುಮನೇಹಳ್ಳಿಯಲ್ಲಿರುವ ಹಜ್ ಭವನಕ್ಕೆ ಭೇಟಿ ನೀಡಿ ಅಗ್ನಿ ಆಕಸ್ಮಿಕ ಸಂಭವಿಸಿದ ಹಾನಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೆ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಕೊತ್ತನೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಅವರು ತನಿಖೆ ಕೈಗೊಂಡಿದ್ದಾರೆ ಎಂದರು.
ಜೊತೆಗೆ, ರಾಜ್ಯ ವಸತಿ ಮಂಡಳಿ(ಕೆಎಚ್‍ಬಿ)ಯ ಎಂಜಿನಿಯರ್ ಗಳು, ಅಗ್ನಿಶಾಮಕ ದಳದವರು ಹಾಗೂ ಬೆಸ್ಕಾಂ ಎಂಜಿನಿಯರ್‍ಗಳು ಪ್ರತ್ಯೇಕವಾಗಿ ಪರಿಶೀಲನೆ ನಡೆಸಲಿದ್ದಾರೆ. ಎರಡು, ಮೂರು ದಿನಗಳಲ್ಲಿ ತನಿಖಾ ವರದಿ ಕೈ ಸೇರಲಿದ್ದು, ಆನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದ ಎಂದು ಅವರು ಹೇಳಿದರು.
ಅಗ್ನಿ ದುರಂತದಲ್ಲಿ ಅಂದಾಜು 4 ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಅದೃಷ್ಟವಶಾತ್ ಯಾವುದೆ ಸಾವು, ನೋವು ಸಂಭವಿಸಲಿಲ್ಲ. ಐಎಎಸ್, ಕೆಎಎಸ್ ಪರೀಕ್ಷೆಯ ತರಬೇತಿಗೆ ಮಕ್ಕಳು ಇಲ್ಲಿಗೆ ಬರುವವರಿದ್ದಾರೆ. ಅವರಿಗೆ ಯಾವುದೆ ರೀತಿಯ ತೊಂದರೆ ಆಗಬಾರದೆಂದು ಹಜ್‍ಭವನದ ಹಿಂಭಾಗದಲ್ಲಿರುವ ಮತ್ತೊಂದು ಕಟ್ಟಡದಲ್ಲಿ ತರಬೇತಿ ತರಗತಿಗಳನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.
ಹಜ್ ಭವನಕ್ಕೆ 5 ಕೋಟಿ ರೂ. ಅನುದಾನ ಕೋರಿ ಮುಖ್ಯಮಂತ್ರಿಗೆ ಈ ಹಿಂದೆ ಮನವಿ ಮಾಡಲಾಗಿತ್ತು. ಈಗ ಆಗಿರುವ ನಷ್ಟಕ್ಕೆ ಸಂಬಂಧಿಸಿದಂತೆಯೂ ಪ್ರಸ್ತಾವನೆ ಸಲ್ಲಿಸುತ್ತೇವೆ. ಸಮ್ಮೇಳನ ಸಭಾಂಗಣವನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಕೆಆರ್ ಐಡಿಎಲ್ ನವರಿಗೆ ವಹಿಸಲಾಗಿತ್ತು. ಕಾಮಗಾರಿ ಪೂರ್ಣಗೊಳಿಸಿ ನಮಗೆ ಹಸ್ತಾಂತರ ಮಾಡುವ ಮುನ್ನ ಈ ದುರ್ಘಟನೆ ಸಂಭವಿಸಿದೆ ಎಂದು ರಹೀಂ ಖಾನ್ ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಜ್ ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್ ಮಾತನಾಡಿ, ಹಜ್ ಭವನದ ಕಟ್ಟಡದ ಸಾಮಥ್ರ್ಯದ ಮೇಲೆ ಈ ಅಗ್ನಿ ದುರಂತದಿಂದಾಗಿ ಏನಾದರೂ ಪರಿಣಾಮ ಬೀರಿದೆಯೆ? ಎಂಬುರ ಕುರಿತು ರಾಜ್ಯ ವಸತಿ ಮಂಡಳಿ(ಕೆಎಚ್‍ಬಿ)ಯವರು ಪರಿಶೀಲನೆ ನಡೆಸಿ ವರದಿ ನೀಡುತ್ತಾರೆ ಎಂದರು.
ಕೆಎಚ್‍ಬಿ, ಅಗ್ನಿಶಾಮಕ ದಳ ಹಾಗೂ ಬೆಸ್ಕಾಂ ನವರು ನಡೆಸಲಿರುವ ಪರಿಶೀಲನೆಯ ಮೇಲ್ವಿಚಾರಣೆಗಾಗಿ ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ, ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರನ್ನು ಒಳಗೊಂಡ ತನಿಖಾ ಸಮಿತಿಯನ್ನು ರಚನೆ ಮಾಡಲಾಗಿದೆ. ಈಗಾಗಲೆ ಪೊಲೀಸ್ ತನಿಖೆ ಆರಂಭವಾಗಿದೆ ಎಂದು ಅವರು ಹೇಳಿದರು.
ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಝ್ ಖಾನ್ ಮಾತನಾಡಿ, ಕೆಆರ್ ಐಡಿಎಲ್‍ನವರೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ಅವರು ಕಾಮಗಾರಿ ಪೂರ್ಣಗೊಳಿಸಿ ನಮಗೆ ಸಭಾಂಗಣ ಹಸ್ತಾಂತರ ಮಾಡಬೇಕು. ಇದೀಗ, ಅವರು ವಿಮೆ ಮೂಲಕ ನಷ್ಟ ಭರಿಸುತ್ತಾರೊ? ಅಥವಾ ಸಿಎಸ್‍ಆರ್ ನಿಧಿ ಬಳಕೆ ಮಾಡುತ್ತಾರೋ ಗೊತ್ತಿಲ್ಲ. ಆದರೆ, ಕಾಮಗಾರಿ ಪೂರ್ಣಗೊಳಿಸಿ ಅವರು ನಮಗೆ ನೀಡಬೇಕು ಎಂದರು.