ಕೇಂದ್ರ ಸರ್ಕಾರದ ಭಾರತ್ ರೈಸ್ ಮಾರಾಟ ತಾತ್ಕಾಲಿಕ ಸ್ಥಗಿತ
ನಾಲ್ಕು ತಿಂಗಳಲ್ಲೇ ಸ್ಥಗಿತಗೊಂಡ ಕೇಂದ್ರ ಸರ್ಕಾರದ ಯೋಜನೆ
ಬೆಂಗಳೂರು: ಕೇಂದ್ರ ಸರ್ಕಾರ ಆರಂಭಿಸಿದ್ದ ಭಾರತ್ ರೈಸ್ ಮಾರಾಟವನ್ನು ಜುಲೈ ತಿಂಗಳಿನಿಂದ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿರುವ ಬಗ್ಗೆ ವರದಿಯಾಗಿದೆ. ಈ ಯೋಜನೆಯಡಿ 29 ರೂ.ಗೆ 1 ಕೆಜಿ ಅಕ್ಕಿ, 27.50 ರೂ.ಗೆ 1 ಕೆಜಿ ಗೋಧಿ ಹಿಟ್ಟು, 60 ರೂ.ಗೆ 1 ಕೆಜಿ ಕಡಲೆ ಬೇಳೆ ಮಾರಾಟ ಮಾಡಲಾಗುತ್ತಿತ್ತು.
ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ದಿನಸಿ ವಿತರಣೆಯ ಉದ್ದೇಶದಿಂದ ದೇಶದ ಎಲ್ಲಾ ಜನರಿಗೆ ಕಡಿಮೆ ಬೆಲೆಯಲ್ಲಿ ಅಕ್ಕಿ ವಿತರಿಸಲು ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ಭಾರತ್ ರೈಸ್ ಅಕ್ಕಿಯನ್ನು ಬಿಡುಗಡೆ ಮಾಡಿತ್ತು.
ನ್ಯಾಷನಲ್ ಅಗ್ರಿಕಲ್ಚರ್ ಕೋ ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಮಾರಾಟದ ಜವಾಬ್ದಾರಿಯನ್ನು ವಹಿಸಿತ್ತು.
ಕೇಂದ್ರ ಸರಕಾರ 2024ರ ಫೆಬ್ರವರಿ 2ರಂದು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯುವ ಉದ್ದೇಶದಿಂದ ಕಡಿಮೆ ದರದಲ್ಲಿ ಗುಣಮಟ್ಟದ ಅಕ್ಕಿ ವಿತರಿಸಲು ಆರಂಭಿಸಿದ್ದ ಈ ಯೋಜನೆಯು ಮತದಾರರನ್ನು ಸೆಳೆಯುವಲ್ಲಿ ಮುಖ್ಯ ಪಾತ್ರ ವಹಿಸಿತ್ತು.
ಜನ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಗ್ರಾಹಕರಿಗೆ ಮೊಬೈಲ್ ವ್ಯಾನ್ ಮೂಲಕ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿತ್ತು. ಜೂನ್ 10 ರವರೆಗೆ ಕೇಂದ್ರ ಸರ್ಕಾರ ಆದೇಶದ ಅನ್ವಯ ದಾಸ್ತಾನುಗಳು ಮಾರಾಟವಾದ ನಂತರ ಪೂರೈಕೆಯನ್ನು ಸ್ಥಗಿತ ಮಾಡಲಾಗಿದೆ ಎಂದು ತಿಳಿದು ಬಂದಿದೆ.