ತಮಿಳುನಾಡು ಬೇಡಿಕೆ ತಿರಸ್ಕಾರ ಮಾಡಿದ್ದು ಸಂತಸ ತಂದಿದೆ: ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು, ಸೆ.26: ನಿತ್ಯ 12,500 ಕ್ಯೂಸೆಕ್ ನೀರು ಬಿಡುಗಡೆಗೆ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿಯು ತಿರಸ್ಕಾರ ಮಾಡಿದ್ದು ಸಂತಸ ತಂದಿದೆ. ನಮ್ಮ ರಾಜ್ಯದ ಅಧಿಕಾರಿಗಳು ಸಮರ್ಥವಾಗಿ ವಾದ ಮಂಡಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಿತ್ಯ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸ್ಸು ಬಳಿಕ ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಮಂಗಳವಾರ ಸಂಜೆ ಅವರು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಆಣೆಕಟ್ಟೆ ಕೆಳಗಿನ ಕಾವೇರಿ ಜಲಾನಯನ ಪ್ರದೇಶದಿಂದ ಸಾಮಾನ್ಯವಾಗಿ 2 ಸಾವಿರ ಕ್ಯೂಸೆಕ್ ಹರಿದು ಹೋಗುತ್ತಿರುತ್ತದೆ. ಒಂದು ಸಾವಿರ ಕ್ಯೂಸೆಕ್ ಬಿಡಬೇಕಾಗುತ್ತದೆ. ಕನಕಪುರ, ಬೆಂಗಳೂರು ಕಡೆಯ ಮಳೆ ನೀರು ಹೋಗುತ್ತಾ ಇರುತ್ತದೆ. ಎರಡು ಮೂರು ದಿನದಿಂದ ಒಳಹರಿವು ಚೆನ್ನಾಗಿದೆ ಎಂದು ಶಿವಕುಮಾರ್ ಹೇಳಿದರು.
ಇಂತಹ ಸಂಕಷ್ಟದ ಸಮಯದಲ್ಲಿ ಮೇಕೆದಾಟು ಯೋಜನೆಯೇ ಪರಿಹಾರ. ಈ ಯೋಜನೆಯಿಂದ 66 ಟಿಎಂಸಿ ನೀರು ಅವರಿಗೆ ಸೇರುತ್ತದೆ. ಕೆಆರ್ಎಸ್, ಕಬಿನಿ, ಹೇಮಾವತಿ ಆಣೆಕಟ್ಟೆಗಳ ಮೇಲಿನ ಒತ್ತಡ ತಗ್ಗುತ್ತದೆ. ಬೆಂಗಳೂರಿನ ಕುಡಿಯುವ ನೀರಿಗೂ ಸಾಕಷ್ಟು ಅನುಕೂಲ ಆಗುತ್ತದೆ ಎಂದು ಅವರು ಪ್ರತಿಪಾದಿಸಿದರು.
ಕಳೆದ ವಾರ ಸುಪ್ರೀಂಕೋರ್ಟ್ ತೀರ್ಪು ನೀಡುವ ಹೊತ್ತಿನಲ್ಲಿ ‘ಕರ್ನಾಟಕದವರು ಎಷ್ಟು ಬೇಕಾದರೂ ಅಣೆಕಟ್ಟು ಕಟ್ಟಿಕೊಳ್ಳಲಿ, ನಿಮಗೆ ತೊಂದರೆ ಏನು? ನಿಮ್ಮ ಪಾಲಿನ ನೀರು 177 ಟಿಎಂಸಿ ನಿಮಗೆ ಸಿಗುತ್ತದೆ’ ಎಂದು ಸ್ಪಷ್ಟವಾಗಿ ಹೇಳಿದೆ ಎಂದು ತಿಳಿಸಿದ ಶಿವಕುಮಾರ್, ಮೇಕೆದಾಟು ಅಣೆಕಟ್ಟು ನೀರನ್ನು ಕನಕಪುರದವರು ಬಳಸಿಕೊಳ್ಳುತ್ತಾರೆ ಎಂದು ಯಾರೋ ಹೇಳುತ್ತಿದ್ದರು. ಅಣೆಕಟ್ಟು ಇರುವುದೇ ತಮಿಳುನಾಡು ಗಡಿಯಲ್ಲಿ ಎಂದು ಛೇಡಿಸಿದರು.
ಕಾವೇರಿ ನೀರಿನ ಎರಡೂ ಸಮಿತಿಗಳಿಗೆ ಮೇಕೆದಾಟು ಯೋಜನೆ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಸುಪ್ರೀಂ ಕೋರ್ಟಿನ ತೀರ್ಪಿನಿಂದ ಮತ್ತೊಮ್ಮೆ ಭರವಸೆ ಮೂಡಿದೆ, ಆದ ಕಾರಣ ನಮ್ಮ ಸಂಸದರು, ಕೇಂದ್ರ ಸಚಿವರಿಗೆ ಕೇಂದ್ರದ ಮೇಲೆ ಒತ್ತಡ ಹಾಕಿ ಎಂದು ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.
ರಾಜ್ಯದ ಜನರು ಶಾಂತಿಯುತ ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಮ್ಮೆ ಬಂದ್ ಮಾಡಲು ನ್ಯಾಯಾಲಯ ಬಿಡುವುದಿಲ್ಲ, ಆದ ಕಾರಣ ಸೆ.29ರ ಬಂದ್ಗೆ ಅವಕಾಶವಿಲ್ಲ ಎಂದು ಶಿವಕುಮಾರ್ ಹೇಳಿದರು.
ಕಾವೇರಿ ಹೋರಾಟದ ಜೊತೆಗೆ ರಾಜಕೀಯ ಟೀಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಟೀಕೆ ಮಾಡಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಅವರು ತಮ್ಮ ಅಸ್ತಿತ್ವಕ್ಕೆ ಮಾಡುತ್ತಾರೆ. ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಆಗುವುದಿಲ್ಲ. ಬೇಸರ ಮಾಡಿಕೊಳ್ಳಲೂ ಹೋಗುವುದಿಲ್ಲ. ಪ್ರಜಾಪ್ರಭುತ್ವದ ಹಕ್ಕನ್ನು ನಾವು ಪ್ರಶ್ನಿಸಬಾರದು. ಮಾಧ್ಯಮಗಳು ನಮ್ಮ ಮೇಲೆ ಇಲ್ಲಸಲ್ಲದ ಕಥೆಗಳನ್ನು ಹೇಳುತ್ತಾರೆ, ಇದೆಲ್ಲಾ ರಾಜಕೀಯದ ಒಂದು ಭಾಗ ಎಂದರು.