ಹಾವೇರಿ | ದಲಿತ ವ್ಯಕ್ತಿಗೆ ಥಳಿಸಿ, ಕಂಬಕ್ಕೆ ಕಟ್ಟಿ ಹಾಕಿ ದೌರ್ಜನ್ಯ ಆರೋಪ: ನಾಲ್ವರ ಬಂಧನ
ಹಾವೇರಿ: ಡಿಶ್ ಟಿ.ವಿ ಕೇಬಲ್ ಕತ್ತರಿಸಿದ್ದಾನೆ ಎಂದು ಆರೋಪಿಸಿ ದಲಿತ ವ್ಯಕ್ತಿಗೆ ಥಳಿಸಿ, ಕಂಬಕ್ಕೆ ಕಟ್ಟಿ ಹಾಕಿ ದೌರ್ಜನ್ಯ ಎಸಗಿದ ಘಟನೆಯೊಂದು ತಾಲೂಕಿನ ಮೂಕಬಸರಿಕಟ್ಟಿ ಗ್ರಾಮದಲ್ಲಿ ಬುಧವಾರ ಸಂಜೆ ವರದಿಯಾಗಿದೆ.
ತಾಲೂಕಿನ ಮೂಕಬಸರಿಕಟ್ಟಿ ಗ್ರಾಮದ ರಾಮಪ್ಪ ದುರ್ಗಪ್ಪ ಎಂಬವರೇ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಸದ್ಯ ನಾಲ್ವರು ಆರೋಪಿಗಳನ್ನು ಬಂಕಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ: ಮೂಕಬಸರಿಕಟ್ಟಿ ಗ್ರಾಮದ ರಾಮಪ್ಪ ಅವರ ಮನೆಯ ಮುಂಭಾಗದ ಮರದ ಟೊಂಗೆಗಳು ವಿದ್ಯುತ್ ಕಂಬಕ್ಕೆ ತಾಗುತ್ತಿದ್ದಕ್ಕೆ ಕೆಇಬಿ ಸಿಬ್ಬಂದಿ ಮರದ ಟೊಂಗೆಗಳನ್ನು ಕತ್ತಸುವ ವೇಳೆ ಡಿಶ್ ಟಿ.ವಿ ವೈರ್ ತುಂಡಾಗಿ ಬಿದ್ದಿದೆ ಎನ್ನಲಾಗಿದೆ. ರಾಮಪ್ಪನೇ ವೈರ್ ಕತ್ತರಿಸಿದ್ದಾನೆ ಎಂದು ತಪ್ಪಾಗಿ ಭಾವಿಸಿ, ಆರೋಪಿಗಳು ರಾಮಪ್ಪನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಆ ನಂತರ ಹಲ್ಲೆಗೊಳಗಾದ ರಾಮಪ್ಪನ ಮನೆಯವರು ಆರೋಪಿಗಳ ಮನೆ ಬಳಿ ತೆರಳಿ ಗಲಾಟೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳಿಗೆ ಹಲ್ಲೆ ನಡೆಸಿದ್ದಾರೆ ಎಂದೂ ಹೇಳಲಾಗಿದೆ. ಆ ಬಳಿಕ ಮತ್ತೆ ರಾಮಪ್ಪ ದುರ್ಗಪ್ಪನ ಮನೆ ಬಳಿ ತೆರಳಿದ ಆರೋಪಿಗಳು ರಾಮಪ್ಪನನ್ನು ಥಳಿಸಿ, ಕಂಬಕ್ಕೆ ಕಟ್ಟಿ ಹಾಕಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಗೊಳಗಾದ ರಾಮಪ್ಪನಿಗೆ ಬಂಕಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯದ್ದು ಎನ್ನಲಾದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಘಟನೆ ಸುದ್ಧಿ ತಿಳಿಯುತ್ತಿದ್ದಂತೆಯೇ ಬಂಕಾಪುರ ಠಾಣೆ ಪಿಎಸ್ಐ ಹಾಗೂ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಭದ್ರತೆ ಒದಗಿಸಿದ್ದಾರೆ.
ಐವರ ವಿರುದ್ಧ ಪ್ರಕರಣ ದಾಖಲು, ನಾಲ್ವರ ಬಂಧನ
ಮೂಕಬಸರಿಕಟ್ಟಿ ಗ್ರಾಮದ ಖಲಂದರ್‌ಸಾಬ್ ರಾಜೇಸಾಬನವರ, ರಬ್ಬಾನಿ ರಾಜೇಸಾಬನವರ, ಝಹೀರ್ ಅಹ್ಮದ್ ಸವಣೂರ, ಮೋದಿನಸಾಬ ರಾಜೇಸಾಬನವರ, ಆದಮ್ ಸಾಬ್ ರಾಜೇಸಾಬ ವಿರುದ್ಧ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಖಲಂದರ್‌ಸಾಬ್ ರಾಜೇಸಾಬ್ ಎಂಬುವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದಾರೆ. ಖಲಂದರ್‌ಸಾಬ್ ರಾಜೇಸಾಬ ಗುಣವಾದ ಬಳಿಕ ಆತನನ್ನು ಬಂಧಿಸಲಾಗುವುದು ಎಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ ಗುಣಾರೆ ತಿಳಿಸಿದ್ದಾರೆ.