ಎಚ್.ಡಿ. ದೇವೇಗೌಡ, ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ BJP ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಭೇಟಿಯಾಗಿದ್ದಾರೆ.
ಮೊದಲು ಆರ್.ಟಿ.ನಗರದಲ್ಲಿರುವ ಬಸವರಾಜ ಬೊಮ್ಮಾಯಿ ನಿವಾಸದಲ್ಲಿ ಬೊಮ್ಮಾಯಿಯವರನ್ನು ಭೇಟಿ ಮಾಡಿದ ವಿಜಯೇಂದ್ರ, ಬಳಿಕ ಪದ್ಮನಾಭನಗರದಲ್ಲಿರುವ ಎಚ್.ಡಿ.ದೇವೇಗೌಡರ ನಿವಾಸದಲ್ಲಿ ಮಾಜಿ ಪ್ರಧಾನಿಗಳನ್ನು ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ಎಂ.ಕೃಷ್ಣಪ್ಪ, ಸಿ.ಕೆ.ರಾಮಮೂರ್ತಿ, ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಶಾಸಕ ಡಿ.ಸಿ.ತಮ್ಮಣ್ಣನವರು ಉಪಸ್ಥಿತರಿದ್ದರು.
'ಬೊಮ್ಮಾಯಿ ಅವರ ಆಶೀರ್ವಾದ ಹಾಗೂ ಮಾರ್ಗದರ್ಶನ ಕೇಳಿದ್ದೇನೆ' ಎಂದು ಮಾಜಿ ಸಿಎಂ ಬೊಮ್ಮಾಯಿ ಭೇಟಿ ಬಳಿಕ ವಿಜಯೇಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಇನ್ನು ''ಕರುನಾಡಿನ ಹೆಮ್ಮೆ, ಗೌರವಾನ್ವಿತ ಮಾಜಿ ಪ್ರಧಾನಿ ಶ್ರೀ ಹೆಚ್.ಡಿ. ದೇವೇಗೌಡರನ್ನು ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯಲಾಯಿತು. ಈ ವೇಳೆ ಅವರು ಪ್ರೀತಿಯಿಂದ ಸನ್ಮಾನಿಸಿ ಶುಭ ಹಾರೈಸಿದ್ದು ನನ್ನ ರಾಜಕೀಯ ಜೀವನದ ಅವಿಸ್ಮರಣಿಯ ಕ್ಷಣವಾಗಿಸಿತು. ಈ ಹೊತ್ತಿಗೂ ಸ್ಫೂರ್ತಿಯ ಚಿಲುಮೆ ಯಾಗಿರುವ ಅವರ ‘ಹೋರಾಟದ ಛಲ - ಆತ್ಮಸ್ಥೈರ್ಯದ ಬಲ’ ನನ್ನಂಥವರಿಗೆ ಸದಾ ಪ್ರೇರಣಾ ಶಕ್ತಿಯಾಗಿದೆ'' ಎಂದು ದೇವೇಗೌಡರ ಭೇಟಿ ಬಗ್ಗೆ ವಿಜಯೇಂದ್ರ ಅವರು ಟ್ವಟರ್ ನಲ್ಲಿ ಬರೆದುಕೊಂಡಿದ್ದಾರೆ.