ಗೋದಾವರಿ-ಕೃಷ್ಣ-ಕಾವೇರಿ ಯೋಜನೆ | ಕರ್ನಾಟಕಕ್ಕೆ 25 ಟಿಎಂಸಿ ನೀರು ಹೆಚ್ಚಳ ಮಾಡಬೇಕು : ಎಚ್.ಡಿ.ದೇವೇಗೌಡ

ಬೆಂಗಳೂರು : ಗೋದಾವರಿ-ಕೃಷ್ಣ-ಕಾವೇರಿ ನೀರಾವರಿ ಯೋಜನೆಯಲ್ಲಿ ರಾಜ್ಯಕ್ಕೆ ನೀರು ಹೆಚ್ಚಳ ಮಾಡಬೇಕು ಎಂದು ಈ ಹಿಂದೆ ಒತ್ತಾಯಿಸಿದ ಪರಿಣಾಮ ನಮಗೆ 15 ಟಿಎಂಸಿ ನೀರು ಸಿಕ್ಕಿದ್ದು, ಇದನ್ನು 25 ಟಿಎಂಸಿಗೆ ಹೆಚ್ಚಳ ಮಾಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಒತ್ತಾಯಿಸಿದ್ದಾರೆ.
ಶನಿವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗೋದಾವರಿ-ಕೃಷ್ಣ-ಕಾವೇರಿ ಯೋಜನೆ ವಿಚಾರವಾಗಿ ನೀರು ಹೆಚ್ಚಳ ಮಾಡುವಂತೆ ನಾನು ಪ್ರಧಾನಿ ಹಾಗೂ ಕೇಂದ್ರ ನೀರಾವರಿ ಸಚಿವರಿಗೆ 2022 ಮತ್ತು 2024ರಲ್ಲಿ ಪತ್ರ ಬರೆದಿದ್ದೆ. ಸದ್ಯ ನಮಗೆ 15.891 ಟಿಎಂಸಿ ನೀರು ಹಂಚಿಕೆ ಮಾಡಲಾಗಿದ್ದು, ಪ್ರಮಾಣವನ್ನು 25 ಟಿಎಂಸಿಗೆ ಹೆಚ್ಚಳ ಮಾಡಬೇಕು ಎಂದರು.
ಗೋದಾವರಿ-ಕೃಷ್ಣ-ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ನಮಗೆ ಹಂಚಿಕೆ ಮಾಡಿರುವ 15.891 ಟಿಎಂಸಿ ನೀರನ್ನು ಘಟಪ್ರಭಾ ನದಿಗೆ ಹರಿಸುತ್ತೇವೆ ಎಂದಿದ್ದಾರೆ. ಇದು ಹೇಗೆ ಸಾಧ್ಯ? ಗೋದಾವರಿಯಿಂದ ಹರಿಸಿದ ನೀರು ರಾಜ್ಯದಲ್ಲಿ ಕಾವೇರಿಗೆ ಎಲ್ಲಿ ಜೋಡಿಸುತ್ತಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿಯೇ ಇಲ್ಲ. ಅದನ್ನು ಸ್ಪಷ್ಟಪಡಿಸಿ ಎಂದು ಪ್ರಧಾನಿಗೆ ಪತ್ರ ಬರೆಯುತ್ತೇನೆ ಎಂದು ಅವರು ತಿಳಿಸಿದರು.
ನೀರಾವರಿ ವಿಚಾರವಾಗಿ ನಮ್ಮಲ್ಲಿ ಯಾವುದೇ ರಾಜಕೀಯ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿ ಕಾಂಗ್ರೆಸ್ ಸಂಸದರು ಜೊತೆ ನಾನು ನೀರಾವರಿ ವಿಚಾರವಾಗಿ ಮಾತನಾಡಲು ಸಿದ್ಧ. ನಮಗೆ ಇರುವ ನೀರಿನ ಸಮಸ್ಯೆ ಪರಿಹಾರ ಆಗಬೇಕು. ಇದಕ್ಕೆ ನಾನು ನನ್ನ ಹೋರಾಟ ಮುಂದುವರೆಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.
ಸಂಸತ್‍ನಲ್ಲಿ ರಾಜ್ಯಕ್ಕೆ ಹರಿಸಬೇಕಾದ ನೀರಿನ ಪ್ರಮಾಣದ ಬಗ್ಗೆ ನಾನು ಮಾತಾಡಿದ್ದೇನೆ. ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ ಅವರು ಪ್ರಧಾನಿ ಮೋದಿ ಅವರ ಬಳಿ ಮಾತಾನಾಡಲಿದ್ದಾರೆ. ಪ್ರಧಾನಿ ಮೋದಿ ಅವರು ನಮಗೆ ಹತ್ತಿರ ಇರುವುದರಿಂದ ನೀರಿನ ಪ್ರಮಾಣ ಹೆಚ್ಚಳ ಮಾಡಲು ಪ್ರಯತ್ನ ಮಾಡುತ್ತೇವೆ ಎಂದು ಅವರು ಹೇಳಿದರು.
ಇನ್ನು ಮಹದಾಯಿ ಯೋಜನೆ ವಿವಾದ ನ್ಯಾಯಾಲಯದಲ್ಲಿದೆ. ಕಳಸಾ ಬಂಡೂರಿಯಿಂದ 3.5 ಟಿಎಂಸಿ ನೀರು ಬಿಡಲು ಗೋವಾ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಅದಕ್ಕೆ ನಮ್ಮ ಸರಕಾರ ಪ್ರತಿಭಟನೆ ಮಾಡಿ ನ್ಯಾಯಾಲಯದಲ್ಲಿ ಅರ್ಜಿ ಹಾಕಿದೆ. ವಿವಾದ ಕೋರ್ಟ್‍ನಲ್ಲಿರುವಾಗ ಪ್ರಧಾನಿ ಏನು ಮಾಡುತ್ತಾರೆ? ನಮ್ಮವರು ಕೋರ್ಟ್‍ನಲ್ಲಿ ವಾದ ಮಾಡಬೇಕು ಎಂದು ಅವರು ತಿಳಿಸಿದರು.
ನಾನು 4-5 ವರ್ಷ ಬದುಕಿರುತ್ತೇನೆ. ನನ್ನ ಕೊನೆಯ ಉಸಿರು ಇರುವವರೆಗೂ ಹೋರಾಟ ಮಾಡುತ್ತೇನೆ. ಮಹದಾಯಿ ನದಿ ನೀರಿಗಾಗಿಯೂ ನಾವೆಲ್ಲರೂ ಪಕ್ಷಭೇದ ಮರೆತು ಹೋರಾಟ ಮಾಡಬೇಕಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ಎಲ್ಲರೂ ಹೋರಾಟ ಮಾಡಬೇಕು. ರಾಜ್ಯಕ್ಕೆ ಆದ ಅನ್ಯಾಯ ಸರಿಪಡಿಸಲು ಶಕ್ತಿಮೀರಿ ಹೋರಾಟ ಮಾಡೋಣ ಎಂದು ಎಚ್.ಡಿ. ದೇವೇಗೌಡ ಕರೆ ನೀಡಿದರು.