ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಕೊಟ್ಟಿದ್ದು ನಾವು, ಅದರ ಫಲ ಸಿಗುತ್ತಿರುವುದು ಕಾಂಗ್ರೆಸ್‍ಗೆ : ಎಚ್.ಡಿ.ದೇವೇಗೌಡ

ಬೆಂಗಳೂರು : ರಾಜ್ಯದಲ್ಲಿ ಸಾಮಾಜಿಕ ನ್ಯಾಯ, ದುರ್ಬಲರಿಗೆ ಮೀಸಲಾತಿ ಸೌಲಭ್ಯ ತಂದಿದ್ದೇ ನಾವು. ಆದರೆ ಇವತ್ತು ಅದರ ಪ್ರತಿಫಲವನ್ನು ಕಾಂಗ್ರೆಸ್ ಅನುಭವಿಸುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿರುವ ಜೆಡಿಎಸ್ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಮತ್ತು ದುರ್ಬಲ ಜನರಿಗೆ ಮೀಸಲಾತಿ ಸೌಲಭ್ಯ ಕೊಟ್ಟಿದ್ದೇ ನಾವು. ಆದರೆ, ಅದು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಿದೆ ಎಂದರು.
ನಾರಿಯರಿಗೆ ಶಕ್ತಿ ತುಂಬಿದವರು ಪ್ರಧಾನಿ ನರೇಂದ್ರ ಮೋದಿ. ನಾವು ಅವರ ಜೊತೆ ಇದ್ದೇವೆ, ಯಾವ ಭಯವೂ ಇಲ್ಲ. ಪಕ್ಷದಲ್ಲಿ ಮುಂದೆ ಕನಿಷ್ಠ 50 ಮಹಿಳಾ ಸಮಾವೇಶಗಳು ನಡೆಯಬೇಕು. ಭಿಕ್ಷೆ ಬೇಡಿಯಾದರೂ ಹಣ ಕೊಡುತ್ತೇನೆ. ಅದಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ಬರುತ್ತಾರೆ, ನಾನು ಬರುತ್ತೇನೆ. ನಿಖಿಲ್ ಅವರು ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷವನ್ನು ಕಟ್ಟಬೇಕು. ಸಮಾವೇಶಗಳನ್ನು ನಡೆಸಬೇಕು ಎಂದು ಎಚ್.ಡಿ.ದೇವೇಗೌಡ ಸಲಹೆ ನೀಡಿದರು.
ಪಕ್ಷ ಸಂಘಟನೆಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ನಾನು ಕೂಡ ಪ್ರತಿ ಜಿಲ್ಲೆಗೂ ಭೇಟಿ ಕೊಡುತ್ತೇನೆ. ನಿಖಿಲ್ ನೇತೃತ್ವದಲ್ಲಿ ಯುವಕರು ಸಂಘಟನೆಯನ್ನು ಕಟ್ಟಬೇಕು. ನಾವು ನಡೆಸುವ ಸಮಾವೇಶಗಳಲ್ಲಿ ನಾವು ಎಷ್ಟು ಕೆಲಸ ಮಾಡಿದ್ದೇವೆ, ಈ ನಾಡಿನ ಜನರಿಗೆ ಏನೆಲ್ಲಾ ಮಾಡಿದ್ದೇವೆ ಎನ್ನುವುದನ್ನು ಹೇಳಬೇಕು. ಏನೂ ಮಾಡದೆಯೇ ಅಧಿಕಾರ ಅನುಭವಿಸುತ್ತಿರುವವರ ಬಗ್ಗೆಯೂ ನಾವು ಜನರಿಗೆ ತಿಳಿ ಹೇಳಬೇಕಿದೆ ಎಂದು ಎಚ್.ಡಿ.ದೇವೇಗೌಡ ಹೇಳಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ಮಾಜಿ ಸಚಿವರಾದ ಲೀಲಾದೇವಿ ಆರ್. ಪ್ರಸಾದ್, ವೆಂಕಟರಾವ್ ನಾಡಗೌಡ, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಜವರಾಯಿಗೌಡ, ಮಾಜಿ ಶಾಸಕ ಕೆ.ಎ.ತಿಪ್ಪೇಸ್ವಾಮಿ ಹಾಗೂ ಮಹಿಳಾ ಜನತಾದಳ ಮುಖಂಡರು ಸೇರಿ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಜೆಡಿಎಸ್‍ನಿಂದ 80 ಮಹಿಳೆಯರು ವಿಧಾನಸಭೆಗೆ ಸ್ಪರ್ಧಿಸಲಿ..!
ಮುಂದಿನ ವರ್ಷಗಳಲ್ಲಿ ಕನಿಷ್ಠ 80 ಮಹಿಳೆಯರು ನಮ್ಮ ಪಕ್ಷದಿಂದ ವಿಧಾನಸಭೆಗೆ ನಿಲ್ಲಬೇಕು. ಅದನ್ನು ನಾನು ಕಣ್ಣಾರೆ ನೋಡಬೇಕು. ಮೋದಿಯವರು ಮಹಿಳಾ ಸಬಲೀಕರಣಕ್ಕೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಲೊಕಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸಾಗಿದೆ ಎಂದು ಎಚ್.ಡಿ.ದೇವೇಗೌಡ ತಿಳಿಸಿದರು.