ಆಯುಷ್ಮಾನ್ ಭಾರತ್ ವ್ಯಾಪ್ತಿಗೆ ಹೃದಯಾಘಾತ, ಪಾರ್ಶ್ವವಾಯುಗೆ ಚಿಕಿತ್ಸೆ ತರಲು ಎಚ್.ಡಿ.ದೇವೇಗೌಡರ ಒತ್ತಾಯ
ರಾಜ್ಯಸಭೆಯಲ್ಲಿ ಆರೋಗ್ಯ ಕ್ಷೇತ್ರದ ಬಗ್ಗೆ ಮಾಜಿ ಪ್ರಧಾನಿಗಳ ಚರ್ಚೆ

ಎಚ್.ಡಿ.ದೇವೇಗೌಡ
ಹೊಸದಿಲ್ಲಿ: ಆಯುಷ್ಮಾನ್ ಭಾರತ್ ಕಾರ್ಯಕ್ರಮದಡಿಯಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯುಗೆ ಚಿಕಿತ್ಸೆ ಪಡೆಯಲು ರಾಷ್ಟ್ರವ್ಯಾಪಿ ಯೋಜನೆ ರೂಪಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದರು.
ರಾಜ್ಯಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೃದಯಾಘಾತ ಮತ್ತು ಪಾರ್ಶ್ವವಾಯುನಿಂದ ಮರಣ ಹೊಂದುವವರು ಭಾರತದಲ್ಲಿ ಹೆಚ್ಚುತ್ತಿದ್ದಾರೆ. ಪ್ರತಿ ವರ್ಷ ನಾವು ಲಕ್ಷಾಂತರ ಜನರನ್ನು ಕಳೆದುಕೊಳ್ಳುತ್ತಿದ್ದೇವೆ ಮತ್ತು ದುರದೃಷ್ಟವಶಾತ್ ಶೇ.30ರಷ್ಟು ಹೃದಯಾಘಾತಗಳು 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಲ್ಲಿ ಸಂಭವಿಸುತ್ತವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿರುವ ಸಲುವಾಗಿ ತಾಲ್ಲೂಕು ಆಸ್ಪತ್ರೆಗಳಲ್ಲಿ 18,000 ಕ್ಕೆ ರಕ್ತ ಹೆಪ್ಪುಗಟ್ಟುವಿಕೆ ಕರಗಿಸುವ ಇಂಜೆಕ್ಷನ್ಗಳು ಲಭ್ಯವಾಗುವಂತೆ ಮಾಡಬೇಕೆಂದು ಕೋರಿದರು. ಹೀಗೆ ಮಾಡುವುದರಿಂದ ಗೋಲ್ಡನ್. ಅವರ್ ನಲ್ಲಿಯೇ, ಆರು ಗಂಟೆಗಳ ಒಳಗಾಗಿ ಜೀವಗಳನ್ನು ಉಳಿಸಬಹುದು. ಆರಂಭಿಕವಾಗಿ ಆಯುಷ್ಮಾನ್ ಭಾರತ್ ಅಡಿಯಲ್ಲಿ ಆಂಜಿಯೋಪ್ಲ್ಯಾಸ್ಟಿ ಮತ್ತು ಸ್ಟಂಟ್ ಅಳವಡಿಸುವುದಕ್ಕಾಗಿ ರೋಗಿಗಳನ್ನು ಹತ್ತಿರದ ನಗರಗಳಿಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು.
ಆಯುಷ್ಮಾನ್ ಭಾರತ್ ಅಡಿಯಲ್ಲಿ ಆಂಜಿಯೋಪ್ಲ್ಯಾಸ್ಟಿ ಒಳಗೊಳ್ಳಲ್ಪಟ್ಟಿದ್ದರೂ ಜೀವ ರಕ್ಷಕ ಔಷಧಿಗಳನ್ನು ಸಹ ಈ ಯೋಜನೆಯಲ್ಲಿ ಸೇರಿಸಬೇಕು ಎಂದು ಅವರು ಮನವಿ ಮಾಡಿದರು.
ಕಳೆದ ಹತ್ತು ವರ್ಷಗಳಲ್ಲಿ ರಾಷ್ಟ್ರದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ತೀವ್ರಗತಿಯ ಸುಧಾರಣೆಗೆಲೈ ಆಗುತ್ತಿವೆ. 2013-14ರಲ್ಲಿ ಆರೋಗ್ಯ ಕ್ಷೇತ್ರಕ್ಕೆ ಬಜೆಟ್ ಹಂಚಿಕೆ ಕೇವಲ 37,000 ಕೋಟಿಗಳಷ್ಟಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಈ ಹಂಚಿಕೆ 99,058 ಕೋಟಿಗಳಿಗೆ ಏರಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೇಳಿದರು.
ಗ್ರಾಮೀಣ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ದಾದಿಯರ ಕೊರತೆ ನೀಗಿಸಿ :
ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ಎಂಬಿಬಿಎಸ್ ವೈದ್ಯರ ವೇತನ ಹೆಚ್ಚಳಕ್ಕೆ ದೇವೇಗೌಡರು ಬಲವಾಗಿ ಪ್ರತಿಪಾದಿಸಿದರು. ಗ್ರಾಮೀಣ ವೈದ್ಯರು ಪ್ರಸ್ತುತ ತಿಂಗಳಿಗೆ 50,000-60,000 ವೇತನ ಪಡೆಯುತ್ತಿದ್ದಾರೆ. ಕಡಿಮೆ ಸಂಬಳದಿಂದಾಗಿ ವೈದ್ಯರು ಸಹ ಗ್ರಾಮೀಣ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಿಲ್ಲ. ಪಿಎಚ್ಸಿಗಳು, ಸಿಎಚ್ಸಿಗಳು ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ ಹೆಚ್ಚಿನ ವೃತ್ತಿಪರರನ್ನು ಆಕರ್ಷಿಸಲು ಸರ್ಕಾರ ಅವರ ವೇತನವನ್ನು ಕನಿಷ್ಠ 80,000-90,000ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಪ್ರೋತ್ಸಾಹ ಧನ ನೀಡಬೇಕು. ಗ್ರಾಮೀಣ ಆರೋಗ್ಯವನ್ನು ನಾವು ಸುಧಾರಿಸದೇ ಇದ್ದರೆ, ನಮ್ಮ ಹಳ್ಳಿಗಳು ಸರಿಯಾದ ವೈದ್ಯಕೀಯ ಆರೈಕೆಯ ಕೊರತೆಯಿಂದ ಬಳಲುತ್ತಲೇ ಇರುತ್ತವೆ ಎಂದು ಅವರು ಎಚ್ಚರಿಸಿದರು.
ಅದೇ ರೀತಿ, ಸರಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಮತ್ತು ದಾದಿಯರಿಗೆ ಕಡಿಮೆ ಸಂಬಳದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು, ಅವರಿಗೆ ಪ್ರಸ್ತುತ ತಿಂಗಳಿಗೆ ಕೇವಲ 13,000 ವೇತನ ನೀಡಲಾಗುತ್ತದೆ. ಈ ವೇತನವು ದೈನಂದಿನ ವೇತನ ಮಾನದಂಡಕ್ಕಿಂತ ಕಡಿಮೆಯಾಗಿದೆ. ದಾದಿಯರು ತಮ್ಮ ಕುಟುಂಬಗಳನ್ನು ಉಳಿಸಿಕೊಳ್ಳಲು ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದನ್ನು ಮುಂದುವರಿಸಲು ವೇತನವನ್ನು ಕನಿಷ್ಠ 20,000-28,000 ಕ್ಕೆ ಹೆಚ್ಚಿಸಬೇಕು ಎಂದು ಅವರು ಕೋರಿದರು.
ಆಯುಷ್ಮಾನ್ ಭಾರತ್ ಯೋಜನೆ ಬಲಪಡಿಸಿ :
ಆಯುಷ್ಮಾನ್ ಭಾರತ್ ಯೋಜನೆಯ ಯಶಸ್ಸನ್ನು ದೇವೇಗೌಡರು ಶ್ಲಾಘಿಸಿದರು. ಭಾರತದ ಜನಸಂಖ್ಯೆಯ ಶೇ.70ಕ್ಕೂ ಹೆಚ್ಚು ಜನರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. 2018ರಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಪ್ರಾರಂಭಿಸಲಾದ ಈ ಉಪಕ್ರಮವು ಲಕ್ಷಾಂತರ ಜನರಿಗೆ ಆರೋಗ್ಯ ಸೇವೆಯನ್ನು ಕಲ್ಪಿಸಿದೆ. ಬಡ ನಾಗರಿಕರು ಸಹ ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮತ್ತು ಆರೋಗ್ಯ ಸಚಿವರನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದರು.