ಮುಡಾ ಅಕ್ರಮ | ಸತ್ತವರ ಹೆಸರಿನಲ್ಲಿ ಜಮೀನು ಡಿ ನೋಟಿಫಿಕೇಷನ್ ಆಗಿದೆ : ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ಮೈಸೂರಿನ ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪರಿಹಾರವಾಗಿ ಪಡೆದಿರುವ ಜಮೀನು ಮುಡಾಗೆ ಸೇರಿದ ಸ್ವತ್ತು ಆಗಿದ್ದು, ಡಿನೋಟಿಫಿಕೇಷನ್ ಬಳಿಕ ನಾಲ್ಕು ವರ್ಷ ಏನೂ ಬೆಳವಣಿಗೆಯೇ ಆಗಿಲ್ಲ. ಅಲ್ಲದೆ, ಸತ್ತವರ ಹೆಸರಿನಲ್ಲಿ ಜಮೀನು ಡಿ ನೋಟಿಫಿಕೇಷನ್ ಆಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಆರೋಪಿಸಿದ್ದಾರೆ.
ಶನಿವಾರ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಭಾಮೈದ ಖರೀದಿ ಮಾಡಿರುವ ಮೈಸೂರಿನ ಕೆಸರೆ ಬಳಿಯ ಜಮೀನಿಗೆ ಮುಡಾ ಭೂಸ್ವಾಧೀನ ಮಾಡಿ ಪರಿಹಾರ ನೀಡಲಾಗಿದೆ. ಈಗಿರುವಾಗ ಇದು ಖಂಡಿತವಾಗಿಯೂ ಮುಡಾಗೆ ಸೇರಿದ ಜಮೀನು ಆಗುತ್ತದೆ. ಈ ಜಮೀನನ್ನು ಡಿ ನೋಟಿಫಿಕೇಷನ್ ಮಾಡಿ ಖರೀದಿಸಲಾಗಿದೆ. ಇದು ಕಾನೂನುಬಾಹಿರ" ಎಂದರು.
ಸಿದ್ದರಾಮಯ್ಯ ಅವರ ಪತ್ನಿಗೆ ದಾನ ಮಾಡಿದಾಗ ಕೃಷಿ ಭೂಮಿ ಎಂದು ತೋರಿಸುತ್ತಾರೆ. ಆದರೆ, ಆ ಜಾಗ ಭೂ ಪರಿವರ್ತನೆ ಆಗಿತ್ತು. ಜಮೀನಿನ ಹಿನ್ನೆಲೆಯನ್ನು ಯಾರೂ ಪರಿಶೀಲಿಸಲಿಲ್ಲ ಏಕೆ?. ಭೂಮಿ ಬದಲಾವಣೆಯಾದಾಗ ಜಿಲ್ಲಾಧಿಕಾರಿಗಳು ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸಿದ ಅವರು, ಈ ಜಮೀನಿನ ಮೂಲದಾರರು ಲಿಂಗ ಯಾನೆ ಜವರ ಎಂದಿದೆ.
ಈ ಜಮೀನನ್ನು 1992ರಲ್ಲಿ ಮುಡಾ ತನ್ನ ವಶಕ್ಕೆ ಪಡೆಯುವ ನೋಟಿಫಿಕೇಷನ್ ಹೊರಡಿಸಿತ್ತು. 1995ರಲ್ಲಿ ಜಮೀನಿನ ಅಂತಿಮ ಭೂಸ್ವಾಧೀನದ ನೋಟಿಫಿಕೇಷನ್ ಆಗಿದೆ. ಆಗ 3 ಎಕರೆ 16 ಗುಂಟಗೆ 1992 ರಲ್ಲೇ ಈ ಜಮೀನಿಗೆ ಮುಡಾದಿಂದ ಕೋರ್ಟ್‍ಗೆ ಹಣ ಸಂದಾಯ ಆಗಿದೆ. ಆದರೂ 1998ರಲ್ಲಿ ಲಿಂಗನ ಹೆಸರು ಬರುತ್ತದೆ. ಡಿ ನೋಟಿಫಿಕೇಷನ್ ಆಗುತ್ತದೆ. ಈ ಜಮೀನು ಡಿ ನೋಟಿಫಿಕೇಷನ್ ಆದಾಗ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಆಗಿದ್ದರು ಎಂದು ಅವರು ದಾಖಲೆ ಪ್ರದರ್ಶಿಸಿದರು.
1988ರಲ್ಲಿ ಲಿಂಗ ಯಾನೆ ಜವರ ಹೆಸರಿನಲ್ಲಿ ಡಿ ನೋಟಿಫಿಕೇಷನ್ ಆಗಿದೆ. 2004ರಲ್ಲಿ ಮಲ್ಲಿಕಾರ್ಜುನಸ್ವಾಮಿ ಜಮೀನು ಖರೀದಿ ಮಾಡುತ್ತಾರೆ. 2005ರಲ್ಲಿ ಮಲ್ಲಿಕಾರ್ಜುನಸ್ವಾಮಿ ಭೂಮಿ ಬದಲಾವಣೆಗೆ ಅರ್ಜಿ ಸಲ್ಲಿಸುತ್ತಾರೆ. ಆಗ ಸಿದ್ದರಾಮಯ್ಯನವರೇ ಉಪ ಮುಖ್ಯಮಂತ್ರಿ ಆಗಿದ್ದರು. ಭೂಮಿ ಬದಲಾವಣೆಗೆ ಅರ್ಜಿ ಸಲ್ಲಿಸಿದಾಗ ಜಿಲ್ಲಾಧಿಕಾರಿ ಏನು ಮಾಡುತ್ತಿದ್ದರು. ಜಮೀನಿನ ಹಿನ್ನಲೆ ಪರಿಶೀಲಿಸಲಿಲ್ಲವೆ ಏಕೆ ಎಂದು ಪ್ರಶ್ನಿಸಿದರು.
ಮುಡಾದಿಂದ ತಮಗೆ 62 ಕೋಟಿ ಪರಿಹಾರ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಯಾರಪ್ಪನ ಆಸ್ತಿ ಎಂದು 62 ಕೋಟಿ ಕೊಡಬೇಕು. ಇದು ಪಿತಾರ್ಜಿತ ಆಸ್ತಿನಾ? ಯಾರ ಬಳಿ ಖರೀದಿ ಮಾಡಿದ್ದಾರೆ ಎಲ್ಲವೂ ಗೊತ್ತಿದೆ, ನನ್ನ ಬಳಿ ಎಲ್ಲ ದಾಖಲೆ ಇದೆ ಎಂದೂ ಅವರು ಉಲ್ಲೇಖಿಸಿದರು.
ವಾಲ್ಮೀಕಿ ಹಗರಣ: ಆಡಳಿತದಲ್ಲಿ ಬಿಗಿ ಇದ್ದಿದ್ದರೆ ವಾಲ್ಮೀಕಿ ನಿಗಮದಲ್ಲಿ ಹಗರಣ ಆಗುತ್ತಿರಲಿಲ್ಲ. ಚುನಾವಣಾ ನೀತಿ ಸಂಹಿತೆ ಇರುವ ಸಂದರ್ಭದಲ್ಲೇ 94 ಕೋಟಿ ವರ್ಗಾವಣೆಯಾಗಿದೆ. ಚಂದ್ರಶೇಖರ್ ಅವರ ಡೆತ್‍ನೋಟ್ ಇಲ್ಲದಿದ್ದರೆ ಸಿದ್ದರಾಮಯ್ಯ ಅವರೇ ಈ ಪ್ರಕರಣ ಏನು ಮಾಡುತ್ತಿದ್ದಿರಿ? ಎಂದು ಅವರು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಪರಿಷತ್ ಸದಸ್ಯ ಭೋಜೇಗೌಡ, ಶಾಸಕ ಶರಣುಗೌಡ ಕಂದಕೂರ, ಪಕ್ಷದ ಹಿರಿಯ ಮುಖಂಡರಾದ ಪ್ರಕಾಶ್, ರವೀಶ್ ಉಪಸ್ಥಿತರಿದ್ದರು.