ಜೆಡಿಎಸ್ಗೆ ಮರುಜನ್ಮ ಕೊಟ್ಟಿದ್ದೇವೆ ಎಂದ ಯತ್ನಾಳ್ಗೆ ತಿರುಗೇಟು ನೀಡಿದ ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ
ಮಂಡ್ಯ : ಜೆಡಿಎಸ್ಗೆ ಮರುಜನ್ಮ ಕೊಟ್ಟಿದ್ದೇವೆ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಯಾರಿಗೆ ಯಾರು ಮರುಜನ್ಮ ಕೊಟ್ಟಿದ್ದಾರೆ ಎಂದು ಬೀದಿಯಲ್ಲಿ ಚರ್ಚೆ ಮಾಡೋಕೆ ಆಗಲ್ಲ ಅವರು ಹೇಳಿದ್ದಾರೆ.
ಮಂಡ್ಯದಲ್ಲಿ ಶನಿವಾರ ಬೆಳಗ್ಗೆ ರೈತ ಸಭಾಂಗಣ ನವೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ʼಯಾವ ರೀತಿ ನನ್ನ ಪಕ್ಷಕ್ಕೆ ಶಕ್ತಿ ತುಂಬಿದ್ದೇನೆ ಎಂಬ ಚರ್ಚೆ ಈಗ ಅನಗತ್ಯ. ದೆಹಲಿ ನಾಯಕರಿಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಅದನ್ನೆಲ್ಲ ನಾನು ಬೀದಿಯಲ್ಲಿ ನಿಂತು ಚರ್ಚೆ ಮಾಡಲೇ? ಅದರ ಅವಶ್ಯಕತೆ ಇಲ್ಲ. ನಾನು ಈ ಕ್ಷಣದವರೆಗೂ ಜೆಡಿಎಸ್ - ಬಿಜೆಪಿ ಎಂದು ಬೇರ್ಪಡಿಸಿ ಮಾತನಾಡಿಲ್ಲʼ ಎಂದು ಹೇಳಿದರು.
ನಾನು ಚನ್ನಪಟ್ಟಣ ಸೇರಿದಂತೆ ಮೂರು ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಯೇ ನಿಲ್ಲುತ್ತಾರೆ ಎಂದು ಹೇಳಿದ್ದೇನೆಯೇ ಹೊರತು, ಜೆಡಿಎಸ್ ಅಭ್ಯರ್ಥಿಯನ್ನು ಹಾಕುತ್ತೇನೆ ಎಂದು ಹೇಳಿಲ್ಲ. ತ್ಯಾಗದ ಬಗ್ಗೆ ಮಾತನಾಡುವವರು ಅವರ ಆತ್ಮಕ್ಕೆ ಪ್ರಶ್ನೆ ಹಾಕಿಕೊಳ್ಳಬೇಕು. ನಮ್ಮ ಮೈತ್ರಿಗೆ ಅಡ್ಡಿಯಾಗಬಾರದು ಎಂದು ನಡೆದುಕೊಳ್ಳುತ್ತಿದ್ದೇನೆ. ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.