ಕೇಂದ್ರದ ಜತೆ ಸಂಘರ್ಷದಿಂದ ರಾಜ್ಯದ ಯಾವುದೇ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ : ಎಚ್.ಡಿ.ಕುಮಾರಸ್ವಾಮಿ

PC : x/@hd_kumaraswamy
ಹಾವೇರಿ : ಕೇಂದ್ರದ ಜತೆ ಸಂಘರ್ಷ ನಡೆಸುವುದರಿಂದ ರಾಜ್ಯದ ಯಾವುದೇ ಸಮಸ್ಯೆ, ವಿವಾದ ಬಗೆಹರಿಯುವುದೂ ಇಲ್ಲ. ಹೀಗಾಗಿ ಸೌಹಾರ್ದತೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ರವಿವಾರ ಜಿಲ್ಲೆಯ ರಾಣಿಬೆನ್ನೂರುನಲ್ಲಿ ಕರ್ನಾಟಕ ವೈಭವ ವೈಚಾರಿಕ ಹಬ್ಬದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದ ಅಭಿವೃದ್ಧಿಗೆ ಮೋದಿ ಸರಕಾರ ಬದ್ಧವಾಗಿದೆ. ನಾನು ಸೇರಿದಂತೆ ಕೇಂದ್ರದಲ್ಲಿರುವ ರಾಜ್ಯ ಎಲ್ಲ ಸಚಿವರು ಕೆಲಸ ಮಾಡಲು ತಯಾರಿದ್ದಾರೆ. ಆದರೆ, ದಿನಕ್ಕೊಂದು ತಂಟೆ-ತಕರಾರು ಮಾಡಿಕೊಂಡು ರಾಜ್ಯ ಸರಕಾರ ಅಮೂಲ್ಯ ಅವಕಾಶವನ್ನು ಹಾಳು ಮಾಡಿಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಷ್ಟ್ರಕವಿ ಕುವೆಂಪು ಅವರು ‘ಜಯಭಾರತ ಜನನಿಯ ತನುಜಾತೆ' ಎಂದು ಬರೆದಿದ್ದಾರೆ. ಕುವೆಂಪು ಅವರು ಭಾರತವನ್ನು ತಾಯಿಯಾಗಿ ಮತ್ತು ಕರ್ನಾಟಕವನ್ನು ಆಕೆಯ ಮಗಳಂತೆ ಭಾವಿಸಿದ್ದಾರೆ. ಇಂತಹ ಮಹೋನ್ನತ ವಿಶಾಲ ದೃಷ್ಟಿಕೋನ ಅವರದ್ದು ಎಂಬುದನ್ನು ಈ ಒಂದು ಸಾಲಿನ ಮೂಲಕ ಅರ್ಥ ಮಾಡಿಕೊಳ್ಳಬಹುದು. ಆದರೆ, ರಾಜ್ಯ ಸರಕಾರ ಯಾವ ದಿಕ್ಕಿನಲ್ಲಿ ಆಲೋಚನೆ ಮಾಡುತ್ತಿದೆ ಎಂಬ ಬಗ್ಗೆ ಅವಲೋಕನ ಮಾಡಿಕೊಳ್ಳುವುದು ಉಚಿತ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಧಾನಿ ಮೋದಿ ನೇತೃತ್ವದ ಸರಕಾರದಲ್ಲಿ ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಹೆಚ್ಚು ಗೌರವ ಸಲ್ಲಿಸಲಾಗುತ್ತಿದೆ. ಆದರೆ, ಕೆಲವು ವಿಘಟಕ ಶಕ್ತಿಗಳು ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಿವೆ. ರಾಷ್ಟ್ರದ ಹಿತದೃಷ್ಟಿಯಿಂದ ಇದು ಒಳ್ಳೆಯದಲ್ಲ. ಮೋದಿ ಆಡಳಿತದಲ್ಲಿ ದೇಶದ ಪ್ರತಿಯೊಂದು ರಾಜ್ಯವೂ ಸಮತೋಲಿತವಾಗಿ ಅಭಿವೃದ್ಧಿ ಹೊಂದುತ್ತಿದೆ. ಈಶಾನ್ಯ ರಾಜ್ಯಗಳಲ್ಲಿ ಬಹುದೊಡ್ಡ ಪ್ರಗತಿಯ ಪರ್ವವೇ ಆರಂಭವಾಗಿದೆ ಎಂದರು.
ಭಾರತ ಎಲ್ಲ ಕ್ಷೇತ್ರಗಳಲ್ಲಿಯೂ ವೇಗವಾಗಿ ಬೆಳೆಯುತ್ತಿದೆ. ಆದರೆ, ಮನುಷ್ಯ ಸಂಬಂಧಗಳು ಅಳಿಯುತ್ತಿವೆ. ಇದು ನಿಜಕ್ಕೂ ನೋವಿನ ಸಂಗತಿ. ಕರ್ನಾಟಕ ವೈಭವದಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಲಿ ಎಂದ್ಲುವರು ಆಶಯ ವ್ಯಕ್ತಪಡಿಸಿದರು.
ಹರಿಹರದ ಶ್ರೀ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಗೀತಾ ಕಟ್ಟಿ ಅವರಿಗೆ ಸರ್ವಜ್ಞ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಸದ ಬಸವರಾಜ ಬೊಮ್ಮಾಯಿ, ಮಂಜಮ್ಮ ಜೋಗತಿ, ಪ್ರಜ್ಞಾವಾಹದ ಸಂಯೋಜಕ ರಘುನಂದನ, ಪರಿವರ್ತನ ಸಂಘಟನೆಯ ಡಾ. ನಾರಾಯಣ ಪವಾರ, ಪ್ರಾಧ್ಯಾಪಕಿ ವಿಜಯಲಕ್ಷ್ಮಿ ಗೇಟಿ ಉಪಸ್ಥಿತರಿದ್ದರು.