ಕುಮಾರಸ್ವಾಮಿ ಕುಟುಂಬದ ಭೂಮಿ ಒತ್ತುವರಿ ತೆರವು ಪ್ರಕರಣ: ಎರಡನೆ ದಿನವೂ ಸರ್ವೇ ನಡೆಸಿದ ಅಧಿಕಾರಿಗಳು

ಬೆಂಗಳೂರು : ಕೇಂದ್ರ ಸಚಿವ ಎಚ್‍ಡಿ ಕುಮಾರಸ್ವಾಮಿ ಕುಟುಂಬದ ವಿರುದ್ಧ ಭೂ ಒತ್ತುವರಿ ಆರೋಪ ಪ್ರಕರಣ ಸಂಬಂದ ಎರಡನೆ ದಿನವೂ ಇಲ್ಲಿನ ಬಿಡದಿಯ ಕೇತುಗಾನಹಳ್ಳಿ ಗ್ರಾಮದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಕಂದಾಯ ಅಧಿಕಾರಿಗಳು ಸರ್ವೇ ನಡೆಸಿದರು.
ಕೇತಗಾನಹಳ್ಳಿಯ ಸರ್ವೇ 7,8,9,10,16,17 ಮತ್ತು 79ರಲ್ಲಿ ಕುಮಾರಸ್ವಾಮಿ ಅವರು ಸೇರಿದಂತೆ ಇತರರು ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈಗಾಗಲೇ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿದ್ದು, ಒತ್ತುವರಿಯಾದ ಭೂಮಿ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮಂಗಳವಾರ ಕುಮಾರಸ್ವಾಮಿ ಅವರ ತೋಟದ ಮನೆ ಒಳಗೆ ಹೋದ ಅಧಿಕಾರಿಗಳ ತಂಡ, ಅಲ್ಲಿಯೂ ಕೆಲವೆಡೆ ಗುರುತು ಕಾರ್ಯ ನಡೆಸಿ ಕಲ್ಲು ನೆಡುವ ಕೆಲಸ ನಡೆಸಿತ್ತು. ಇಂದು ತೋಟದ ಸುತ್ತ ಗುರುತು ಮಾಡಿ ನಂತರ ಕಲ್ಲು ನೆಡುವ ಕೆಲಸ ನಡೆಸುತ್ತಿದೆ. ನಂತರ ಒತ್ತುವರಿ ಸಂಬಂಧಿಸಿದಂತೆ ಕೇಂದ್ರ ಸಚಿವರಿಗೆ ನೋಟಿಸ್ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿ ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಕುಮಾರಸ್ವಾಮಿ ಸೇರಿದಂತೆ ಇತರರು ಒತ್ತುವರಿ ಮಾಡಿರುವ ಆರೋಪ ಕೇಳಿ ಬಂದಿದೆ. ಎಲ್ಲೆಲ್ಲಿ, ಯಾರಾರು ಅತಿಕ್ರಮಣ ಮಾಡಿದ್ದಾರೋ ಅದನ್ನು ತೆರವುಗೊಳಿಸುವ ಕಾರ್ಯ ನಡೆಸಲಾಗುತ್ತದೆ. ಕೋರ್ಟ್‍ನಲ್ಲಿ ದಾವೆ ಇರುವುದರಿಂದ ಎಲ್ಲ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು.