ನೈಸ್ ಅಕ್ರಮಗಳ ಬಗ್ಗೆ ಪ್ರಧಾನಿ ಮೋದಿಗೆ ದೂರು ನೀಡಲು ಮುಂದಾದ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಆ.5: 'ನೈಸ್ ಅಕ್ರಮದ ಬಗ್ಗೆ ಸೂಕ್ತ ತನಿಖೆ ಆಗಬೇಕು. ಸದನದ ಸಮಿತಿ ವರದಿಯಲ್ಲಿ ಶಿಫಾರಸು ಮಾಡಿರುವಂತೆ ಸಿಬಿಐ ತನಿಖೆಯೇ ನಡೆಯಬೇಕು' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ಧಾರೆ.
ಶನಿವಾರ ಶೇಷಾದ್ರಿಪುರಂನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರಕ್ಕೆ ವಂಚನೆ ಮಾಡಿರುವ ಹಾಗೂ ಜನರ ಭೂಮಿಯನ್ನು ನುಂಗಿರುವ ಕುಳಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ ಕುಮಾರಸ್ವಾಮಿ, ಈ ಕುರಿತ ಎಲ್ಲ ದಾಖಲೆಗಳನ್ನು ಪ್ರಧಾನಿ ನರೇಂದ್ರ ಮೋದಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
''1000 ಕೋಟಿ ರೂಪಾಯಿಗೂ ಮೀರಿ ವರ್ಗಾವಣೆ ದಂಧೆ''
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಎರಡೇ ತಿಂಗಳಿನಲ್ಲಿ ಬರೋಬ್ಬರಿ 1000 ಕೋಟಿ ರೂಪಾಯಿಗೂ ಮೀರಿ ವರ್ಗಾವಣೆ ದಂಧೆ ನಡೆದಿದೆ ಎಂದು
ಈ ಸರಕಾರ ಲೆಕ್ಕಕ್ಕೆ ಇಲ್ಲದಷ್ಟು ದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ದಂಧೆಯಲ್ಲಿ ತೊಡಗಿದೆ. ದಿನದಿಂದ ದಿನಕ್ಕೆ ಅದರ ಅವ್ಯವಹಾರ ಮೇರೆ ಮೀರುತ್ತದೆ. ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ದಂಧೆಯಲ್ಲಿ 1000 ಕೋಟಿಗೂ ಮೀರಿ ಕೈ ಬದಲಾಗಿದೆ ಎಂದು ಅಧಿಕಾರಿಗಳೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಈ ಸರಕಾರ ಪ್ರತಿಯೊಂದು ಹುದ್ದೆಯನ್ನು ಮಾರಿಕೊಳ್ಳುತ್ತಿದೆ. ಪ್ರತಿ ಹುದ್ದೆಗೂ ಹಣ ಪಡೆದು ವರ್ಗಾವಣೆ ಮಾಡುತ್ತಿದೆ. ಅಷ್ಟೇ ಮಾತ್ರವಲ್ಲದೆ, ಒಂದೊಂದು ಹುದ್ದೆಗೂ ಮೂರು ಅಧಿಕಾರಿಗಳ ನಿಯೋಜನೆ ಆಗಿದ್ದಾರೆ. ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಕಚೇರಿಯ ಅಡಿ ಟಿಪ್ಪಣಿಗಳು ಹಾದಿಬೀದಿಯಲ್ಲಿ ಬಿಕರಿ ಆಗುತ್ತಿವೆ ಎಂದ ಅವರು, ಒಬ್ಬ ಮಂತ್ರಿಗೆ ಜೀವನ ಕಳೆಯುವಷ್ಟು ಹಣ ಇದೆ. ಐದಾರು ಜನ್ಮಕ್ಕೆ ಆಗುವಷ್ಟು ಸಂಪತ್ತು ಇದೆ. ಆದರೆ ಆ ಸಚಿವ ಸಣ್ಣಸಣ್ಣ ಹುದ್ದೆಗೂ 10 ರಿಂದ 15 ಲಕ್ಷ ಹಣ ಬೇಡಿಕೆಯಿಟ್ಟಿದ್ದಾರೆ ಎಂದು ಅವರು ಆಪಾದಿಸಿದರು.
ತಮ್ಮ ನೇತೃತ್ವದ ಮೈತ್ರಿ ಸರಕಾರದಲ್ಲಿ ಗೃಹ ಸಚಿವರೂ ಆಗಿದ್ದ ಪರಮೇಶ್ವರ್ ಅವರಿಗೆ ನಾನು ವರ್ಗಾವಣೆ ವಿಷಯದಲ್ಲಿ ಸಲಹೆ ಕೊಟ್ಟಿದ್ದೇನೆ ಎಂದು ಸ್ವತಃ ಅವರೇ ಹೇಳಿದ್ದಾರೆ. ನಾನು ಏನು ಸಲಹೆ ಕೊಟ್ಟಿದ್ದೀನಿ ಎಂದು ಅವರು ಜನರ ಮುಂದೆ ಬಂದು ಹೇಳಲಿ. ಪೆÇಲೀಸ್ ವರ್ಗಾವಣೆಯಲ್ಲಿ ನನ್ನ ಹಸ್ತಕ್ಷೇಪ ಇತ್ತಾ? ನೀವು, ರಾಜ್ಯ ಪೆÇಲೀಸ್ ಮಹಾ ನಿರ್ದೇಶಕರು ಸೇರಿ ವರ್ಗ ಮಾಡಿದ್ದು, ಅಲ್ಲವೇ? ಬಿಡಿಎ ಸಂಬಂಧಿಸಿದ ಗಲಾಟೆ ನನ್ನಿಂದ ಶುರುವಾಯಿತಾ?. ಅಲ್ಲಿ ನಡೆದ ಅವಾಂತರಕ್ಕೆ ಯಾರು ಕಾರಣ? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.