ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ ಕುಮಾರಸ್ವಾಮಿ ಸ್ಪರ್ಧೆ?
ಬೆಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡಲಿದ್ದು, ಈ ಕುರಿತು ಸಂಜೆ ಅಧಿಕೃತವಾಗಿ ಘೋಷಣೆಯಾಗಲಿದೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಅವರು, ಮೂರು ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಹೆಸರುಗಳನ್ನು ಸಂಜೆ ಘೋಷಿಸುವುದಾಗಿ ತಿಳಿಸಿದರು. ಅಲ್ಲದೇ ಇದೇ ವೇಳೆ ಮಂಡ್ಯ ಕ್ಷೇತ್ರದ ಅಭಿವೃದ್ಧಿಗೆ ತಲೆಕೊಡಲು ಸಿದ್ಧ ಎಂದು ಹೇಳಿದರು. ಈ ಮೂಲಕ ಮಂಡ್ಯದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಪರೋಕ್ಷವಾಗಿ ಅವರು ಸುಳಿವು ನೀಡಿದ್ದಾರೆ.
ಮಂಡ್ಯದಲ್ಲಿ ಪುಟ್ಟರಾಜು ಅವರನ್ನು ಕಣಕ್ಕಿಳಿಸಬೇಕೆಂದು ತೀರ್ಮಾನ ಮಾಡಿದ್ದೆವು. ನಿಖಿಲ್ ಕುಮಾರಸ್ವಾಮಿ ಕೂಡ ಸ್ಪರ್ಧೆ ಮಾಡುದಿಲ್ಲ ಎಂದಿದ್ದಾರೆ. ಇನ್ನು ಜಿಲ್ಲೆಯ ಕಾರ್ಯಕರ್ತರು ನನ್ನನ್ನು ನಿಲ್ಲುವಂತೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಇಂದು ಸಂಜೆ ಮಂಡ್ಯ ಜಿಲ್ಲೆಯ ಮುಖಂಡರ ಸಭೆ ನಡೆಸಿ ಅಂತಿಮ ತೀರ್ಮಾನ ತಿಳಿಸುತ್ತೇನೆ ಎಂದು ಹೇಳಿದರು.
ಮಾರ್ಚ್ 29 ರಂದು ಜೆಡಿಎಸ್-ಬಿಜೆಪಿ ಸಮನ್ವಯ ಸಭೆ
ಜೆಡಿಎಸ್-ಬಿಜೆಪಿ ಸಮನ್ವಯ ಸಭೆ ಮಾರ್ಚ್ 29 ರಂದು ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ನಲ್ಲಿ ನಡೆಯಲಿದ್ದು, ಸಭೆಯಲ್ಲಿ ಉಭಯ ಪಕ್ಷಗಳ ಪ್ರತಿ ಜಿಲ್ಲೆಯಿಂದ ತಲಾ ಇಬ್ಬರು ನಾಯಕರು ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.