ಎಚ್ಡಿಕೆ ಇಲ್ಲದಿದ್ದರೆ ಜಿ.ಟಿ.ದೇವೇಗೌಡ, ತನ್ನ ಮಗನೊಂದಿಗೆ ಜೈಲಿನಲ್ಲಿರಬೇಕಿತ್ತು : ಎಚ್.ಡಿ.ರೇವಣ್ಣ ಆಕ್ರೋಶ
ಎಚ್.ಡಿ.ರೇವಣ್ಣ
ಬೆಂಗಳೂರು : ಜಿ.ಟಿ.ದೇವೇಗೌಡ ಅವರನ್ನು ಕಾಂಗ್ರೆಸ್ ಸರಕಾರ ಬಂಧಿಸಲು ಸಿದ್ಧತೆ ಮಾಡಿಕೊಂಡಿತ್ತು. ಕುಮಾರಸ್ವಾಮಿ ಇಲ್ಲದೆ ಹೋಗಿದ್ದರೆ ನನ್ನ ರೀತಿ ಜಿ.ಟಿ.ದೇವೇಗೌಡ ಮತ್ತು ಅವರ ಪುತ್ರ ಜೈಲಿನಲ್ಲಿ ಇರಬೇಕಾಗಿತ್ತು ಎಂದು ಶಾಸಕ ಎಚ್.ಡಿ.ರೇವಣ್ಣ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2017ರಲ್ಲಿ ಅಂದಿನ ಕಾಂಗ್ರೆಸ್ ಸರಕಾರ ಜಿ.ಟಿ.ದೇವೇಗೌಡ ಅವರನ್ನು ಬಂಧನ ಮಾಡಲು ಸಿದ್ಧತೆ ಮಾಡಿಕೊಂಡಿತ್ತು. ಈ ವಿಷಯದ ಬಗ್ಗೆ ನನಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದರು ಎಂದರು.
ಬಳಿಕ ಎಚ್.ಡಿ.ಕುಮಾರಸ್ವಾಮಿ ಅವರು ಪೊಲೀಸರಿಗೆ ಫೋನ್ ಕರೆ ಮೂಲಕ ಗುಟುರು ಹಾಕಿದ್ದರು. ಕುಮಾರಸ್ವಾಮಿಯವರ ಒಂದೇ ಒಂದು ಗುಟುರಿಗೆ ಪೊಲೀಸರು ಜಿ.ಟಿ.ದೇವೇಗೌಡರನ್ನು ಬಂಧಿಸಲಿಲ್ಲ. ಇಲ್ಲದಿದ್ದರೆ ನನ್ನ ರೀತಿ ಜಿ.ಟಿ.ದೇವೇಗೌಡ ಮತ್ತು ಅವರ ಪುತ್ರ 20 ದಿನ ಜೈಲಿನಲ್ಲಿ ಕಳೆಯಬೇಕಾಗಿತ್ತು ಎಂದು ಎಚ್.ಡಿ.ರೇವಣ್ಣ ಹೇಳಿದರು.
ಜಿ.ಟಿ.ದೇವೇಗೌಡರ ವಿರುದ್ಧ ಯಾವ ಪ್ರಕರಣದಲ್ಲಿ ಬಂಧಿಸಲು ಹೊರಟಿದ್ದರು ಎಂದು ಈಗ ಸರಕಾರದಲ್ಲಿರುವ ನಾಯಕರನ್ನೇ ಕೇಳಬೇಕು ಎಂದು ಎಚ್.ಡಿ.ರೇವಣ್ಣ ತಿಳಿಸಿದರು.
ನನಗೂ ಆಫರ್ ಬಂದಿತ್ತು: ಜೆಡಿಎಸ್ ಶಾಸಕರನ್ನು ಕೊಂಡುಕೊಳ್ಳುವುದು ಮಾತಿನಲ್ಲಿ ಹೇಳಿದಷ್ಟು ಸುಲಭವಲ್ಲ. ಈ ಹಿಂದೆ ಒಂದು ಪಕ್ಷದ ನಾಯಕರೊಬ್ಬರು ತಮ್ಮ ಪಕ್ಷಕ್ಕೆ ಆಹ್ವಾನಿಸಿ ‘ನೀವು ಡಿಸಿಎಂ ಆಗಿ, ನಾನು ಸಿಎಂ ಆಗುತ್ತೇನೆ’ ಎಂದು ಆಫರ್ ಕೊಟ್ಟಿದ್ದರು. ಆದರೆ, ನಾನು ಯಾವತ್ತೂ ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ. ಅಧಿಕಾರದ ಲಾಲಸೆ ಇದ್ದಿದ್ದರೆ ನಾನು ರಾಜ್ಯದ ಉಪ ಮುಖ್ಯಮಂತ್ರಿಯಾಗಿರುತ್ತಿದ್ದೆ ಎಂದು ಎಚ್.ಡಿ.ರೇವಣ್ಣ ತಿಳಿಸಿದರು.