ನಿರೀಕ್ಷಣಾ ಜಾಮೀನು ಕೋರಿ ಎಚ್.ಡಿ.ರೇವಣ್ಣ ಅರ್ಜಿ | ಆಕ್ಷೇಪಣೆ ಸಲ್ಲಿಸಲು ಎಸ್ಐಟಿಗೆ ಕೋರ್ಟ್ ಸೂಚನೆ
ಬೆಂಗಳೂರು : ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಮೊದಲ ಆರೋಪಿ ಮಾಜಿ ಸಚಿವ, ಶಾಸಕ ಎಚ್.ಡಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು, ವಿಶೇಷ ತನಿಖಾ ತಂಡಕ್ಕೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿದ್ದಾರೆ. ವಿಚಾರಣೆ ವೇಳೆ ಎಚ್.ಡಿ.ರೇವಣ್ಣ ಪರ ಹಿರಿಯ ವಕೀಲ ಮೂರ್ತಿ ಡಿ. ನಾಯ್ಕ್ , ʼಎಫ್ಐಆರ್ ನಲ್ಲಿ ಜಾಮೀನು ನೀಡಬೇಕಾದ ಆರೋಪಗಳಿವೆ. ಆದರೆ ಮ್ಯಾಜಿಸ್ಟ್ರೇಟ್ ಗೆ ಅತ್ಯಾಚಾರ ಆರೋಪ ಸೇರಿಸಲು ಅರ್ಜಿ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಎಚ್.ಡಿ.ರೇವಣ್ಣ ಪ್ರಮಾಣಪತ್ರ ಸಲ್ಲಿಸಿದ್ದಾರೆʼ ಎಂದು ವಾದ ಮಂಡಿಸಿದರು.
ಈ ವೇಳೆ ಮಧ್ಯ ಪ್ರವೇಶಿದ ನ್ಯಾಯಾಧೀಶರು, ʼಎಫ್ಐಆರ್ ನಲ್ಲಿ ಎಲ್ಲವೂ ಜಾಮೀನು ನೀಡಬಹುದಾದ ಆರೋಪಗಳಿವೆ. ನಿರೀಕ್ಷಣಾ ಜಾಮೀನು ಅರ್ಜಿ ಹೇಗೆ ಊರ್ಜಿತವಾಗುತ್ತದೆ. ನೀವು ವಿಚಾರಣಾ ನ್ಯಾಯಾಲಯದಲ್ಲಿ ನೇರವಾಗಿ ಹಾಜರಾಗಬಹುದಿತ್ತಲ್ಲವೇ ? ಎಂದು ಎಚ್.ಡಿ.ರೇವಣ್ಣ ಪರ ಹಿರಿಯ ವಕೀಲರಿಗೆ ಕೋರ್ಟ್ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ರೇವಣ್ಣ ಪರ ವಕೀಲರು ಎಸ್ಐಟಿ ಸಲ್ಲಿಸಿದ ಅರ್ಜಿಯ ವಿವರ ಇನ್ನೂ ಲಭ್ಯವಿಲ್ಲ. ಮಧ್ಯಂತರ ಜಾಮೀನು ನೀಡಲು ಮನವಿ ಮಾಡಿದರು. ಈ ವೇಳೆ ಎಸ್ ಪಿಪಿ ಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಾಳೆಗೆ ಮುಂದೂಡಿದೆ. ಅಲ್ಲದೆ, ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸ್ಐಟಿಗೆ ಸೂಚಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶಿಸಿದೆ.