ಎಚ್.ಡಿ ರೇವಣ್ಣರ ಆಪ್ತನ ಹತ್ಯೆ ಪ್ರಕರಣ: ಮೂವರು ಮಹಿಳೆಯರ ಸಹಿತ 6 ಮಂದಿ ಆರೋಪಿಗಳ ಬಂಧನ
ಕೊಲೆಗೀಡಾದ ಕೃಷ್ಣೇ ಗೌಡ ಮತ್ತು ಬಂಧಿತ ಆರೋಪಿಗಳು
ಹಾಸನ: ನಗರದಲ್ಲಿ ಆ.9 ರಂದು ನಡೆದಿದ್ದ ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರ ಆಪ್ತ ಕೃಷ್ಣಗೌಡ ಅವರ ಕೊಲೆ ಪ್ರಕರಣವನ್ನು ಮೂರೇ ದಿನದಲ್ಲಿ ಬೇಧಿಸಿರುವ ಪೊಲೀಸರು, ಆರು ಜನ ಹಂತಕರನ್ನು ಬಂಧಿಸಿದ್ದಾರೆ.
ಇಂದು ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಎಸ್ಪಿ ಹರಿರಾಂ ಶಂಕರ್, ಕಳೆದ ಬುಧವಾರ ಮಧ್ಯಾಹ್ನ ನಡೆದಿದ್ದ ಕೃಷ್ಣಗೌಡ ಹತ್ಯೆಗೆ ಕಳೆದ 6 ತಿಂಗಳಿಂದಲೇ ಯೋಜನೆ ಮಾಡಲಾಗಿತ್ತು ಎಂದು ತನಿಖೆಯಿಂದ ಬಯಲಾಗಿದೆ ಎಂದು ಹೇಳಿದರು.
ಖಚಿತ ಮಾಹಿತಿ ಮೇರೆಗೆ ಸುರೇಶ್, ಕೃಷ್ಣಕುಮಾರ್, ಸಂಜಯ್, ಸುಧಾ ರಾಣಿ, ಅಶ್ವಿನಿ ಹಾಗೂ ಚೈತ್ರಾ ಬಂಧಿತ ಆರೋಪಿಗಳು ಎಂದು ವಿವರಿಸಿದರು.
ಕೊಲೆಗೆ ಕಾರಣನಾಗಿರುವ ಪ್ರಮುಖ ಆರೋಪಿ ಯೋಗಾನಂದ ಹಾಗೂ ಸುರೇಶ್ ಹತ್ಯೆಯಾದ ಕೃಷ್ಣಗೌಡ ಅವರಿಂದ ಸ್ಥಳೀಯ ಸುದ್ದಿ ಚಾನೆಲ್ ಮಾಡಲು ಹಾಗೂ ಸಿನೆಮಾ ಹಾಗೂ ಇತರೆ ವ್ಯವಹಾರಗಳಿಗೆ ಕೋಟಿ ಮೊತ್ತದ ಹಣ ಹೂಡಿಕೆ ಮಾಡಿಸಿದ್ದರು. ಬಳಿಕ ವ್ಯವಹಾರದಲ್ಲಿ ಯಾವುದೇ ಲಾಭ ಬಾರದೇ ಇದ್ದಾಗ ಕೃಷ್ಣಗೌಡ ನಾನು ನೀಡಿರುವ ಹಣ ವಾಪಸ್ ಕೊಡುವಂತೆ ಕೇಳಿದ್ದ. ಇದೇ ಕಾರಣಕ್ಕೆ ಕೃಷ್ಣಗೌಡ, ಸುರೇಶ್ ಮತ್ತು ಯೋಗಾನಂದ್ ನಡುವೆ ಕಲಹ ಮೂಡಿತ್ತು.
ಕೃಷ್ಣಗೌಡ ನೀಡಿದ್ದ ಹಣ ವಾಪಸ್ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಎಲ್ಲರೂ ಸೇರಿ ಕೃಷ್ಣಗೌಡ ಹತ್ಯೆಗೆ ಯೋಜನೆ ಹಾಕಿದ್ದರು. ಈ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಯೋಗಾ ನಂದ ತಲೆ ಮರೆಸಿಕೊಂಡಿದ್ದಾನೆ ಎಂದು ಹೇಳಿದರು.
ಬಂಧಿತ ಆರೋಪಿಗಳಲ್ಲಿ ನಾಪತ್ತೆ ಯಾಗಿರುವ ಯೋಗಾನಂದ್ ಸ್ಥಳೀಯ ಚಾನೆಲ್ ನಡೆಸುತ್ತಿದ್ದ, ಇದರಲ್ಲಿ ಸುರೇಶ್ ಸಹ ಪಾಲುದಾರನಾಗಿದ್ದ. ಇವರಲ್ಲದೆ ಯೋಗಾನಂದ್ ಪತ್ನಿ ಸುಧಾರಾಣಿ, ಗೆಳತಿ ಅಶ್ವಿನಿ, ಮಾವ ಕೃಷ್ಣಕುಮಾರ್ ಹಾಗೂ ಸಂಬಂಧಿ ಸಂಜಯ್ ಮತ್ತು ಸಂಜಯ್ ಪತ್ನಿ ಚೈತ್ರಾ ಅವರನ್ನು ಬಂಧಿಸಲಾಗಿದೆ ಎಂದು ವಿವರಣೆ ನೀಡಿದರು.
ಕೊಲೆಗೆ ಸಂಚು ರೂಪಿಸಿ ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಯೋಗಾನಂದ್ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಹೇಳಿದರು.