ಮಹಿಳೆ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ದಲಿತರ ನಿವೇಶನ ಕಬಳಿಕೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್ಡಿಕೆ ಆರೋಪ
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (X/@hd_kumaraswamy)
ಬೆಂಗಳೂರು: ಮುಡಾದಿಂದ ಹಂಚಿಕೆ ಆಗಿದ್ದ ದಲಿತರೊಬ್ಬರ ನಿವೇಶನ ಕಬಳಿಸಿ ಸಿಎಂ ಸಿದ್ದರಾಮಯ್ಯ ಮನೆ ನಿರ್ಮಿಸಿಕೊಂಡಿದ್ದಾರೆ. ಬಳಿಕ ಆ ಮನೆಯನ್ನು ಮಾರಾಟ ಮಾಡುವ ನಾಟಕ ಆಡಿ ಸಿಕ್ಕಿಬಿದ್ದಿದ್ದಾರೆ. ಈ ಕುರಿತ ದಾಖಲೆಗಳು ನನ್ನ ಬಳಿ ಇವೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಆಗಿದ್ದಾಗ ನೀವು ಯಾರ ಜಾಗವನ್ನು ಲಪಟಾಯಿಸಿ ಮನೆ ಕಟ್ಟಿದಿರಿ ಸ್ವಾಮಿ? ಅದರ ದಾಖಲೆ ಬೇಕಾ ನಿಮಗೆ? ದಲಿತರಿಗೆ ಮುಡಾದಿಂದ ಹಂಚಿಕೆ ಆಗಿದ್ದ ನಿವೇಶನದಲ್ಲಿ ಅಕ್ರಮವಾಗಿ ಮನೆ ಕಟ್ಟಿದವರು ಯಾರು ಎಂಬುದನ್ನು ಸ್ವಲ್ಪ ಹೇಳುತ್ತೀರಾ?’ ಎಂದು ಪ್ರಶ್ನಿಸಿದರು.
ವಿಶೇಷಚೇತನರೊಬ್ಬರ ಬಳಿ 24 ಸಾವಿರ ರೂ.ಕಟ್ಟಿಸಿಕೊಂಡು ಮುಡಾ ನಿವೇಶನ ಹಂಚಿಕೆ ಮಾಡಲಾಗಿತ್ತು. ಆ ಜಾಗದ ಸುಳ್ಳು ದಾಖಲೆ ಸೃಷ್ಟಿ ಮಾಡಿಕೊಂಡು ಸಾಕಮ್ಮ ಎಂಬುವವರ ಹೆಸರಿನಲ್ಲಿ 10 ಸಾವಿರ ಚದರ ಅಡಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡವರು ಇವರು. ಆಮೇಲೆ ನಿವೇಶನದ ನಿಜ ಮಾಲಕರು ಬಂದು ನೋಡಿದರೆ ಅಲ್ಲಿ ಮನೆ ಕಟ್ಟಲಾಗಿತ್ತು. ಈ ಬಗ್ಗೆ ಜನ ಮರೆತಿರಬಹುದು, ಈ ಕುಮಾರಸ್ವಾಮಿ ಬಳಿ ಈಗಲೂ ದಾಖಲೆ ಇದೆ ಎಂದು ಹೇಳಿದರು.
ನನ್ನ ಜೀವನ ತೆರದ ಪುಸ್ತಕ ಎಂದು ಹೇಳುತ್ತಾರೆ ಅವರು. ಆ ತೆರೆದ ಪುಸ್ತಕವನ್ನು ಜನ ಒಮ್ಮೆ ತೆರೆದು ನೋಡಬೇಕು. ನಿವೇಶನ ಹೊಡೆದುಕೊಂಡರು, ಆಮೇಲೆ ಅಕ್ರಮವಾಗಿ ಮನೆ ಕಟ್ಟಿಕೊಂಡರು, ನಂತರ ಅದನ್ನು ಯಾರಿಗೆ ಮಾರಾಟ ಮಾಡಿದರು? ಇಷ್ಟಕ್ಕೂ ಯಾರಿಗೆ ಮಾಡಿದರು? ಈಗ ಯಾರ ಬಾಕಿ ಇದೆ ಅದು? ಸುಮ್ಮನೆ ಜನರ ಕಣ್ಣಿಗೆ ಮಂಕುಬೂದಿ ಎರಚಲು ಮಾರಾಟ ಎಂದು ತೋರಿಸಿಕೊಂಡಿದ್ದಾರೆ. ಎಲ್ಲವನ್ನೂ ತೆಗೆದು ನೋಡಿದರೆ ಅಸಲಿ ಬಣ್ಣ ಗೊತ್ತಾಗುತ್ತದೆ. ಆಗ ಇನ್ನೊಂದು ಹಗರಣ ಎಂದು ಅವರು ಆರೋಪ ಮಾಡಿದರು.