ಎಚ್‍ಡಿಕೆ ಜನತಾ ದರ್ಶನ | ಅಧಿಕಾರಿಗಳು ಹೋಗದಂತೆ ಸುತ್ತೋಲೆ ಹೊರಡಿಸಿರುವುದು ನಾನಲ್ಲ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ನಡೆಸಿದ ‘ಜನತಾ ದರ್ಶನ’ ಸಂಬಂಧ ಅಧಿಕಾರಿಗಳು ಶಿಷ್ಟಾಚಾರದ ಅನ್ವಯ ಸುತ್ತೋಲೆ ಹೊರಡಿಸಿದ್ದಾರೆ. ಅದು ಕುಮಾರಸ್ವಾಮಿ ಅವರಿಗಾಗಿಯೇ ಹೊರಡಿಸಿದ ಸುತ್ತೋಲೆ ಅಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುತ್ತೋಲೆ ಹೊರಡಿಸುವುದು ನಾನಲ್ಲ. ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದೆ. ನಾನು ವಿಧಾನಸಭೆ ಪ್ರತಿಪಕ್ಷ ನಾಯಕನಾಗಿದ್ದಾಗ ಪ್ರಗತಿ ಪರಿಶೀಲನೆ ಸಭೆ ನಡೆಸುವುದಕ್ಕೂ ಅಂದಿನ ಬಿಜೆಪಿ ಸರಕಾರ ಅವಕಾಶ ನೀಡಿರಲಿಲ್ಲ’ ಎಂದು ಹೇಳಿದರು.
ಅಧಿಕಾರಿಗಳು ಶಿಷ್ಟಾಚಾರ ಪಾಲಿಸುತ್ತಾರೆ :
‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಜನರನ್ನು ಇಟ್ಟುಕೊಂಡು ಜನತಾ ದರ್ಶನ ಮಾಡಲಿ. ಹಳ್ಳಿ, ಹಳ್ಳಿ ತಿರುಗಲಿ, ಯಾರು ಬೇಡ ಎಂದು ಹೇಳಿದ್ದಾರೆ. ಅಧಿಕಾರಿಗಳು ಶಿಷ್ಟಾಚಾರ ಪಾಲಿಸುತ್ತಾರೆ. ಅದರ ಪ್ರಕಾರ ಸಂಸದರನ್ನು ಹೇಗೆ ಸ್ವಾಗತಿಸಬೇಕೋ ಆ ರೀತಿ ಕೆಲಸ ಮಾಡುತ್ತಾರೆ. ನಾವು ಹೊಸದಿಲ್ಲಿಗೆ ತೆರಳಿ ಅಲ್ಲಿನ ಅಧಿಕಾರಿಗಳನ್ನು ಬಳಸಿಕೊಳ್ಳಲು ಆಗುತ್ತದೆಯೇ? ಜನಕ್ಕೆ ಹೋಗಬೇಡಿ ಎಂದು ಹೇಳಲು ಆಗುತ್ತದೆಯೇ? ನನಗೆ ಈ ಆರೋಪದ ವಿಚಾರ ಗೊತ್ತೇ ಇಲ್ಲ. ನನಗೂ ಇದಕ್ಕೂ ಯಾವುದೇ ರೀತಿಯ ಸಂಬಂಧವೂ ಇಲ್ಲ’
-ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ