ಎಚ್ಡಿಕೆ, ನಿಖಿಲ್ ಉಚ್ಚಾಟನೆ ನಕಲಿ ಪತ್ರ ವೈರಲ್: ದೂರು ನೀಡಿದ ಸಿ.ಎಂ.ಇಬ್ರಾಹಿಂ
ಬೆಂಗಳೂರು, ಅ.17: ತತ್ ಕ್ಷಣದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ ಎನ್ನುವ ನಕಲಿ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಸಂಬಂಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ʼʼಜೆಡಿಎಸ್ ಪಕ್ಷವು ದಶಕಗಳಿಂದ ಜಾತ್ಯತೀತ ಸಿದ್ಧಾಂತವನ್ನು ಪಾಲಿಸುತ್ತಾ ಬಂದಿದ್ದು, ನಮ್ಮ ಪಕ್ಷದಲ್ಲಿ ಎಲ್ಲ ಜಾತಿ ಧರ್ಮಗಳ ನಾಯಕರು, ಕಾರ್ಯಕರ್ತರು ಪಕ್ಷಕ್ಕಾಗಿ ದುಡಿದಿದ್ದಾರೆ. ಇತ್ತೀಚೆಗೆ ಜೆಡಿಎಸ್ ಪಕ್ಷದ ಶಾಸಕಾಂಗ ನಾಯಕ ಎಚ್.ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಕೋಮುವಾದಿ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಕಂಡುಬಂದಿದೆʼʼ
ʼʼಈ ತತ್ ಕ್ಷಣದಿಂದ ಎಚ್.ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರನ್ನು ಈ ಕೂಡಲೇ ಪಕ್ಷದಿಂದ ಉಚ್ಚಾಟಿಸಲು ತೀರ್ಮಾನಿಸಲಾಗಿದೆʼʼ ಎಂದು ಉಲ್ಲೇಖಿಸಿ ಸಿಎಂ ಇಬ್ರಾಹಿಂ ಅವರು ಸಹಿ ಹಾಕಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಸಂಬಂಧ ಇದು ಅಧಿಕೃತ ಪತ್ರವಲ್ಲ ಯಾರೋ ನಕಲಿಯಾಗಿ ಸೃಷ್ಟಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪತ್ರ ಎಂದು ಆರೋಪಿಸಿ ಸ್ವತಃ ಸಿ.ಎಂ. ಇಬ್ರಾಹಿಂ ಅವರು ಇಲ್ಲಿನ ಜೆಸಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಹರಿದಾಡುತ್ತಿರುವ ನಕಲಿ ಪತ್ರ