‘ಅಕ್ರಮ ಮರ ಕಡಿತಲೆ ಪ್ರಕರಣ’ ಎಚ್‍ಡಿಕೆ ಸಮರ್ಥನೆ ದುರದೃಷ್ಟಕರ: ಸಚಿವ ಈಶ್ವರ್ ಖಂಡ್ರೆ
ಬೆಂಗಳೂರು: ಅಕ್ರಮವಾಗಿ ಮರ ಕಡಿಯುವ, ಪ್ರಕೃತಿ, ಪರಿಸರ ನಾಶ ಮಾಡುವವರ ಪರವಾಗಿ ಯಾರೂ ಮಾತನಾಡಬಾರದು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಂದಗೋಡನಹಳ್ಳಿಯ ಅಕ್ರಮ ಮರ ಕಡಿತಲೆ ಪ್ರಕರಣದಲ್ಲಿ ಪದೇ ಪದೇ ಮಾತನಾಡುತ್ತಿರುವುದು ದುರದೃಷ್ಟಕರ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಬುಧವಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೊರತಂದಿರುವ 2024ನೇ ಸಾಲಿನ ಡೈರಿಯನ್ನು ತಮ್ಮ ಕಚೇರಿಯಲ್ಲಿ ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಹಾಸನ ಡಿಎಫ್‍ಒ ನಿಯೋಜನೆಗೆ 1 ಕೋಟಿ ರೂ. ಡಿಮ್ಯಾಂಡ್ ಮಾಡಲಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪ ಕಪೆಪೋಲ ಕಲ್ಪಿತ. ಹಾಸನದ ಡಿ.ಸಿ.ಎಫ್. ಮೋಹನ್ ಕುಮಾರ್ ಪ್ರಾಮಾಣಿಕ ಅಧಿಕಾರಿ ಅವರನ್ನು ಅಮಾನತು ಮಾಡಿದ್ದು ಸರಿಯಲ್ಲ ಎಂದು ಹೇಳಿದ್ದ ಕುಮಾರಸ್ವಾಮಿ, ಈಗ ಅದೇ ಡಿಸಿಎಫ್ 50 ಲಕ್ಷ ರೂ.ನೀಡಿ ಹಾಸನ ಪೋಸ್ಟಿಂಗ್ ಪಡೆದಿದ್ದಾರೆ ಎನ್ನುತ್ತಿರುವುದು ಸರಿಯೇ? ಎಂದು ಈಶ್ವರ್ ಖಂಡ್ರೆ ಪ್ರಶ್ನಿಸಿದರು.
50 ಲಕ್ಷ ರೂ. ಲಂಚ ಕೊಟ್ಟು ಪೋಸ್ಟಿಂಗ್ ಪಡೆದಿದ್ದೆ ನಿಜವಾದರೆ ಅವರು ಪ್ರಾಮಾಣಿಕ ಅಧಿಕಾರಿ ಹೇಗೆ ಆಗುತ್ತಾರೆ? ಇದು ಕುಮಾರಸ್ವಾಮಿ ಅವರ ಕಪೋಲ ಕಲ್ಪಿತ ದ್ವಂದ್ವ ಹೇಳಿಕೆಗೆ ಜ್ವಲಂತ ಸಾಕ್ಷಿ. ಪ್ರಕೃತಿ, ಪರಿಸರ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ ಎಂದು ಅವರು ಹೇಳಿದರು.
ನೂರಾರು ಮರಗಳನ್ನು ಅಕ್ರಮವಾಗಿ ಕಡಿಯುತ್ತಿದ್ದರೆ, ಅರಣ್ಯ ನಾಶ ಮಾಡುತ್ತಿದ್ದರೆ ಸಹಜವಾಗಿಯೆ ವನ್ಯಜೀವಿಗಳು ನಾಡಿಗೆ ಬರುತ್ತವೆ. ಪರಿಸರ ಕಾಳಜಿ ಇರುವ ಕುಮಾರಸ್ವಾಮಿ ಹಾಸನ ಜಿಲ್ಲೆಯಲ್ಲಿ ಅದರಲ್ಲೂ ಬೇಲೂರು, ಸಕಲೇಶಪುರ ವಲಯದಲ್ಲಿ ಅರಣ್ಯ ಒತ್ತುವರಿ ತೆರವು ಹಾಗೂ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸುವ ಬಗ್ಗೆ ಮಾತನಾಡಬೇಕು ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಹಾಸನದ ಡಿ.ಸಿ.ಎಫ್. ಹೊಣೆಯನ್ನು ಮೈಸೂರಿನವರಿಗೆ ಪ್ರಭಾರ ವಹಿಸಲಾಗಿದೆ. ಪ್ರಭಾರಿ ಇದ್ದವರನ್ನೆ ಹಾಸನ ಡಿ.ಸಿ.ಎಫ್. ಆಗಿ ವರ್ಗಾವಣೆ ಮಾಡಲಾಗಿದೆ. ಜೊತೆಗೆ ಕಾಡಾನೆ ಸೆರೆ ಕಾರ್ಯಾಚರಣೆಯನ್ನೂ ಪುನಾರಂಭಿಸಲಾಗಿದೆ ಎಂದು ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದರು.