ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಢಿಕ್ಕಿ: ಓರ್ವ ಸ್ಥಳದಲ್ಲೇ ಮೃತ್ಯು
ಹಸನ್ ಅಲಿ ಅಹ್ಮದ್
ಕಲಬುರಗಿ: ದ್ವಿಚಕ್ರ ವಾಹನಗಳ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿ, ಇಬ್ಬರಿಗೆ ಗಂಭೀರ ಗಾಯಗಳಾದ ಘಟನೆ ಭೂಸನೂರ ಹತ್ತಿರದ ಗುಡ್ಡದಮ್ಮನ ಗುಡಿ ಹತ್ತಿರ ಮಂಗಳವಾರ ವರದಿಯಾಗಿದೆ.
ಮೃತ ಸವಾರನನ್ನು ಆಳಂದನ ನೌಕಡ್ ಗಲ್ಲಿಯ ನಿವಾಸಿ ಹಸನ್ ಅಲಿ ಅಹ್ಮದ್ ಅಲಿ ಖಂಡೋವಾಲೆ (38) ಎಂದು ಗುರುತಿಸಲಾಗಿದೆ.
ಆಳಂದದಿಂದ ಜವಳಿ (ಡಿ) ಗ್ರಾಮಕ್ಕೆ ಹೊಗುತ್ತಿದ್ದ ಹಸನ್ ಅಲಿ ಬೈಕ್ ಮತ್ತು ಇದೇ ವೇಳೆ ಭೂಸನೂರದಿಂದ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಕಡೆಗೆ ಬರುತ್ತಿದ್ದ ಬುಲೆಟ್ ಬೈಕ್ ಮುಖಾಮುಖಿ ಢಿಕ್ಕಿ ಹೊಡೆದಿದ್ದು, ಹಸನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬುಲೆಟ್ ಮೇಲಿದ್ದ ಕಿರಣಕುಮಾರ್ ಸೂರ್ಯಕಾಂತ ಹತಗುಂದಿ, ಸಿದ್ರಾಮ ಸೋಮಣ್ಣ ಪೂಜಾರಿ ಎಂಬುವವರ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪಿಎಸ್ಐ ವಾತ್ಸಲ್ಯ ಬಿರಾದಾರ, ಅಪರಾಧ ವಿಭಾಗದ ಪಿಎಸ್ಐ ಬಸವರಾಜ ಸಣಮನಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.