ಪ್ರತಿಯೊಬ್ಬರಿಗೂ ಆರೋಗ್ಯ, ಶಿಕ್ಷಣ ನಮ್ಮ ಸರಕಾರದ ಆದ್ಯತೆ: ಸಚಿವ ಡಾ:ಜಿ.ಪರಮೇಶ್ವರ
ತುಮಕೂರು,ನ.04:ಸ್ವಾತಂತ್ರೋತ್ತರದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಮತ್ತು ಶಿಕ್ಷಣ ನೀಡುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿವೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ.ಪರಮೇಶ್ವರ್ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕುಟುಂಬ ಆರೋಗ್ಯ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶನಿವಾರ ನಗರದ ಎಂಪ್ರೆಸ್ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ‘ಆರೋಗ್ಯ ತುಮಕೂರು ಅಭಿಯಾನ’ ಕಾರ್ಯಕ್ರಮ ಅಂಗವಾಗಿ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 2500 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೊಂದುವುದರ ಮೂಲಕ ದೇಶದಲ್ಲಿಯೇ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಅತಿ ಹೆಚ್ಚು ಪಿ.ಹೆಚ್.ಸಿ.ಗಳಿರುವುದು ಉತ್ತರಪ್ರದೇಶ ರಾಜ್ಯದಲ್ಲಿ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಇತ್ತೀಚೆಗೆ ಹೊಸ ಹೊಸ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು ಹಾಗೂ ಕಾಲಕಾಲಕ್ಕೆ ಅಗತ್ಯ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎಂದರು.
ಆರೋಗ್ಯ ತುಮಕೂರು ಅಭಿಯಾನದಲ್ಲಿ ಜಿಲ್ಲೆಯ 30 ವರ್ಷ ಮೇಲ್ಪಟ್ಟವರಿಗೆ ಮನೆ ಮನೆಗೆ ತೆರಳಿ ಮಧುಮೇಹ, ರಕ್ತದೊತ್ತಡ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠ ಕ್ಯಾನ್ಸರ್ ತಪಾಸಣೆ, ಕಣ್ಣಿನ ಪರೀಕ್ಷೆ, ಕುಷ್ಠರೋಗ ತಪಾಸಣೆ, ಅನೇಮಿಯ, ಕ್ಷಯರೋಗ, ದಂತ ತಪಾಸಣೆ ಪರೀಕ್ಷೆಗಳನ್ನು ಮಾಡಲಾಗುವುದು.ತಪಾಸಣೆಗೆ ಒಳ ಪಡಿಸಿದ ನಂತರ ಯಾವುದಾದರೂ ರೋಗ ಇರುವುದು ಕಂಡು ಬಂದರೆ ಅದನ್ನು ತಡೆಯುವುದಕ್ಕಾಗಿ ಪೂರಕವಾದ ಔಷಧಿಯನ್ನು ಕೊಡಲಾಗುತ್ತದೆಎಂದರು.
ಈ ಕಾರ್ಯಕ್ರಮವನ್ನು ನಮ್ಮ ಜಿಲ್ಲೆಯಲ್ಲಿ ಪ್ರಾರಂಭಿಸುವುದಕ್ಕೆ ಹೆಚ್ಚಿನ ಕಾಳಜಿ ವಹಿಸಿದ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪಂಚಾಯತ್ ಸಿಇಓ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.
ನಮ್ಮ ಸರಕಾರ ಆರೋಗ್ಯ ಇಲಾಖೆಯಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ.ಮುಖ್ಯಮಂತ್ರಿಗಳು ಇತ್ತೀಚೆಗೆ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆ ಮಾಡುವ ಸಂದರ್ಭದಲ್ಲಿ ರಾಜ್ಯದ ಒಂಬತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಎಂಆರ್‍ಐ ಯಂತ್ರಗಳು ಇಲ್ಲದಿರುವುದರ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಸಿದಾಗ,ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳನ್ನು ಕರೆಸಿ ನಿಗದಿತ ಅವಧಿಯೊಳಗೆ ಆಸ್ಪತ್ರೆಗೆ ಎಂಆರ್‍ಐ ಯಂತ್ರಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು ಎಂದು ಸ್ಮರಿಸಿದರು.
ಒಬ್ಬ ರೋಗಿಯ ಜೀವವನ್ನು ಉಳಿಸುವ ಶಕ್ತಿ ವೈದ್ಯರಿಗೆ ಇರುತ್ತದೆ. ಆದ್ದರಿಂದ ವೈದ್ಯರು ರೋಗಿಯ ಕಾಯಿಲೆಯನ್ನು ಪತ್ತೆಹಚ್ಚುವುದಕ್ಕಾಗಿ ಸರಿಯಾದ ಪರೀಕ್ಷೆಗಳನ್ನು ಮಾಡಿ ಅದಕ್ಕೆ ಪೂರಕವಾದ ಔಷಧಿಯನ್ನು ಕೊಡುವುದರ ಮೂಲಕ ಅವರ ಜೀವವನ್ನು ಉಳಿಸುವ ಕೆಲಸವನ್ನು ವೈದ್ಯರು ಮಾಡಬೇಕು.ಪಿಜಿ ವೈದ್ಯಕೀಯ ಶಿಕ್ಷಣ ಮುಗಿಸಿದ ನಂತರ ವಿದ್ಯಾರ್ಥಿಗಳು ಒಂದು ವರ್ಷ ಕಡ್ಡಾಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವುದರಿಂದ ಗ್ರಾಮೀಣ ಭಾಗದಲ್ಲಿರುವ ವೈದ್ಯರ ಕೊರತೆಯನ್ನು ನಿವಾರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಿಲ್ಲಾಸ್ಪತ್ರೆ ಆವರಣದಲ್ಲಿ ಸುಮಾರು 68 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡಿದೆ.ನೂರು ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಈ ಮಾಹೆಯೊಳಗೆ ಉದ್ಘಾಟನೆ ಮಾಡಲಾಗುವುದು.ತುಮಕೂರು ಜಿಲ್ಲೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಡೆ ಹೋಗುವುದನ್ನು ತಪ್ಪಿಸಲು ಜಿಲ್ಲಾ ಆಸ್ಪತ್ರೆಯಲ್ಲಿಯೇ ಅತ್ಯಾಧುನಿಕ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಆರೋಗ್ಯ ಇಲಾಖೆಯ ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಲವಾರು ಯೋಜನೆಗಳ ಮಾಹಿತಿ ಇಂದಿಗೂ ಕೆಲವರಿಗೆ ತಿಳಿದಿರುವುದಿಲ್ಲ. ಕಂದಾಯ ಇಲಾಖೆಗೆ ಗ್ರಾಮ ಸಹಾಯಕರು ಹೇಗೆ ಆಧಾರ ಸ್ಥಂಭವೋ ಹಾಗೆ ಆರೋಗ್ಯ ಇಲಾಖೆಗೆ ಆಶಾ ಕಾರ್ಯಕರ್ತೆಯರು ಆಧಾರ ಸ್ಥಂಭಗಳಿದ್ದಂತೆ. ಆಶಾ ಕಾರ್ಯಕರ್ತರಿಗೆ ಆ ಗ್ರಾಮದ ಜನಸಂಖ್ಯೆ, ಮಕ್ಕಳ ಸಂಖ್ಯೆ, ಗರ್ಭಿಣಿಯರ ಸಂಪೂರ್ಣ ಮಾಹಿತಿ ತಿಳಿದಿರುತ್ತದೆ ಎಂದು ಹೇಳಿದರು.
ಸರಕಾರ ಎಲ್ಲಾ ಜನರಿಗೂ ಒಂದೇ ರೀತಿಯ ವೈದ್ಯಕೀಯ ಪರಿಹಾರ ಧನವನ್ನು ನೀಡಬೇಕು.ಇದರಲ್ಲಿ ಯಾವುದೇ ತಾರತಮ್ಯವನ್ನು ಮಾಡಬಾರದು.ಹಿಂದಿನ ಕಾಲದಲ್ಲಿ ಹತ್ತಾರು ಕಾಯಿಲೆಗೆ ಒಂದೇ ಔಷಧಿಯನ್ನು ಕೊಡುತ್ತಿದ್ದರು, ಆದರೆ ಇಂದು ಒಂದು ಕಾಯಿಲೆಗೆ ಹಲವಾರು ಔಷಧಿಯನ್ನು ನೀಡಲಾಗುತ್ತಿದೆ. ದೇಶದಲ್ಲಿ ಕೊರೋನಾ ಅಂತಹ ಹೊಸ ಕಾಯಿಲೆಗಳು ಕಂಡು ಬಂದಾಗ ಅವುಗಳನ್ನು ನಿಯಂತ್ರಿಸುವುದರ ಜೊತೆಗೆ ಅದಕ್ಕೆಪೂರಕವಾದ ಔಷಧಿಯನ್ನು ಉತ್ಪಾದಿಸುವಲ್ಲಿ ನಮ್ಮ ದೇಶದ ವೈದ್ಯಕೀಯ ಕ್ಷೇತ್ರ ಇಂದು ಬಲಿಷ್ಠವಾಗಿದೆ ಎಂದು ಹೇಳಿದರು.
ಹೆರಿಗೆಯನ್ನು ಗ್ರಾಮೀಣ ಭಾಗಗಳಲ್ಲಿ ಸೂಲಗಿತ್ತಿ ಅವರಿಂದ ಮಾಡಿಸುವ ಬದಲು ಆಸ್ಪತ್ರೆಗಳಲ್ಲಿಯೇ ಹೆರಿಗೆಯನ್ನು ಮಾಡಿಸಿದರೆ, ಮುಂದೆ ವಯಸ್ಸಾದ ನಂತರ ಮಹಿಳೆಯರಲ್ಲಿ ಉಲ್ಬಣಗೊಳ್ಳುವ ಗರ್ಭಕೋಶ ಕ್ಯಾನ್ಸರ್ ಕಾಯಿಲೆಯನ್ನು ಮುಂಚಿತವಾಗಿ ತಡೆಯಲು ಸಾಧ್ಯವಾಗುತ್ತದೆ ಎಂದರು.
ಕಾರ್ಮಿಕ ಇಲಾಖೆಯ ತುಮಕೂರು ಉಪ ವಿಭಾಗದ 195 ಹಾಗೂ ಮಧುಗಿರಿ ಉಪ ವಿಭಾಗದ 120 ಜನ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ಲ್ಯಾಪ್‍ಟಾಪ್‍ಗಳನ್ನು ವಿತರಿಸಲಿದ್ದು, ಇದರ ಪೈಕಿ ಇಂದು 8 ಜನ ವಿದ್ಯಾರ್ಥಿಗಳಿಗೆ ಮಾನ್ಯ ಗೃಹ ಸಚಿವರು ಮತ್ತು ಸಹಕಾರ ಸಚಿವರು ಸಾಂಕೇತಿಕವಾಗಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್,ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜ ಬಿ.ವಿ.,ಡಿಹೆಚ್‍ಓ ಡಾ.ಮಂಜುನಾಥ್ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ವೀಣಾ ಉಪಸ್ಥಿತರಿದ್ದರು.