ʼನಮ್ಮ ಕ್ಲಿನಿಕ್ʼ ನಂ.1 ಕ್ಲಿನಿಕ್ ಗಳನ್ನಾಗಿ ಮಾರ್ಪಡಿಸಲು ಮುಂದಾದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಪ್ರಾಯೋಗಿಕವಾಗಿ ಶೇ.25 ರಷ್ಟು ಕ್ಲಿನಿಕ್ ಗಳಿಗೆ ಮೇಜರ್ ಸರ್ಜರಿ
ಬೆಂಗಳೂರು: ರಾಜ್ಯದಾದ್ಯಂತ ನಮ್ಮ ಕ್ಲಿನಿಕ್ ಗಳನ್ನ ನಂಬರ್ 1 ಕ್ಲಿನಿಕ್ ಗಳನ್ನಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಭಿನ್ನ ಪ್ರಯೋಗಗಳಿಗೆ ಕೈಹಾಕಿದ್ದಾರೆ. ನಗರ ಪ್ರದೇಶಗಳ ಬಡವರು ಹಾಗೂ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆಯನ್ನ ನಮ್ಮ ಕ್ಲಿನಿಕ್ ಗಳ ಮುಖಾಂತರ ಒದಗಿಸಬಹುದು. ಈ ನಿಟ್ಟಿನಲ್ಲಿ ನಮ್ಮ ಕ್ಲಿನಿಕ್ ಗಳಿಗೆ ಹೊಸ ಕಾಯಕಲ್ಪ ನೀಡಲು ಯೋಜನೆ ರೂಪಿಸಲಾಗುತ್ತಿದೆ.
ಪ್ರಾಯೋಗಿಕ ಹಂತವಾಗಿ ರಾಜ್ಯದಲ್ಲಿರುವ ನಮ್ಮ ಕ್ಲಿನಿಕ್ ಗಳಲ್ಲಿ ಶೇ 25 ರಷ್ಟು ಕ್ಲಿನಿಕ್ ಗಳ ಸಮಯ ಬದಲಾವಣೆಗೆ ನಿರ್ಧರಿಸಲಾಗಿದೆ. ಅಸಹಾಯಕರು ಬಡವರಿಗೆ ಅನುಕೂಲ ಆಗಲಿ ಎಂದು ರಾಜ್ಯದ ನಗರ ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್ ಗಳನ್ನ ತೆರೆಯಲಾಗಿತ್ತು. ಆದರೆ, ನಮ್ಮ ಕ್ಲಿನಿಕ್ ಗಳು ತೆರೆಯುತ್ತಿದ್ದ ಸಮಯ, ಜನಸಾಮಾನ್ಯರಿಗೆ ಅನುಕೂಲಕರವಾಗಿಲ್ಲ. ಪ್ರಸ್ತುತ ನಮ್ಮ ಕ್ಲಿನಿಕ್ ಗಳು ಬೆಳಗ್ಗೆ 9 ಗಂಟೆಗೆ ತೆರದು ಮಧ್ಯಾಹ್ನ 12.30ಕ್ಕೆ ಮುಚ್ಚಲಾಗುತ್ತೆ. ಬಳಿಕ ಮಧ್ಯಾಹ್ನ 2 ಗಂಟೆಗೆ ತೆರೆದು 4.30ಕ್ಕೆ ಕ್ಲೋಸ್ ಮಾಡಲಾಗುತ್ತಿತ್ತು.
ಇದೀಗ ನಮ್ಮ ಕ್ಲಿನಿಕ್ ಗಳನ್ನ ಸಂಜೆ ಕ್ಲಿನಿಕ್ ಮಾದರಿಯಲ್ಲಿ ಸಮಯ ಬದಲಾಯಿಸಲು ನಿರ್ಧರಿಸಲಾಗಿದ್ದು, 12 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ಕಾರ್ಯನಿರ್ವಸುವಂತೆ ತಯಾರಿ ನಡೆಸಲಾಗಿದೆ. ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗುವ ಸಮಯ ಹಾಗೂ ನಮ್ಮ ಕ್ಲಿನಿಕ್ ಗಳ ಸಮಯ ಎರಡು ಕೂಡ ಸೇಮ್ ಆಗುತ್ತಿತ್ತು. ಇದರಿಂದ ಬಡವರು ಈ ಸೌಲಭ್ಯದಿಂದ ವಂಚಿತರಾಗುತ್ತಾರೆ. ಹೀಗಾಗಿ ರಾತ್ರಿಯ ವರೆಗೂ ನಮ್ಮ ಕ್ಲಿನಿಕ್ ಗಳು ಕಾರ್ಯನಿರ್ವಹಿಸುವಂತೆ ಸಮಯ ಬದಲಾವಣೆ ಮಾಡಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚಿಸಿದ್ದರು. ರಾತ್ರಿ ವರೆಗು ಕಾರ್ಯನಿರ್ವಹಿಸಬೇಕಾದರೆ ಎರಡು ಶಿಫ್ಟ್ ಮಾಡಬೇಕಾಗಬಹುದು. ಆಗ ಹೆಚ್ಚಿನ ವೈದ್ಯರು ಬೇಕಾಗುತ್ತಾರೆ. ಈಗಾಗಲೇ ವೈದ್ಯರ ಕೊರತೆಯಿದೆ ಎಂಬ ವಾದಗಳು ಕೂಡಾ ಕೇಳಿ ಬಂದಿದ್ದವು. ಅಂತಿಮವಾಗಿ ಎರಡು ಶಿಫ್ಟ್ ಮಾಡುವ ಬದಲು ಒಂದೇ ಶಿಫ್ಟ್ ನಲ್ಲಿ ಸಮಯ ಬದಲಾವಣೆ ಮಾಡಲು ಆರೋಗ್ಯ ಸಚಿವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರು.
ಬೆಳಗ್ಗೆ 7 ಗಂಟೆಗೆ ನಮ್ಮ ಕ್ಲಿನಿಕ್ ಗಳು ತೆರೆಯಲಿದ್ದು, ಬೆಳಗ್ಗೆ ಹೊತ್ತಿನಲ್ಲಿ ಲ್ಯಾಬ್ ಟೆಕ್ನಿಷಿಯನ್ ಮಾತ್ರ ಇರುತ್ತಾರೆ. ಬಳಿಕ 12 ಗಂಟೆಯಿಂದ 8 ಗಂಟೆವರೆಗೂ ವೈದ್ಯರು ಹಾಗೂ ನರ್ಸ್ ಜನರಿಗೆ ಚಿಕಿತ್ಸೆ ನೀಡುವಂತೆ ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ ಒಟ್ಟು 415 ನಮ್ಮ ಕ್ಲಿನಿಕ್ ಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಶೇ 25 ರಷ್ಟು ಕ್ಲಿನಿಕ್ ಗಳನ್ನ ಪ್ರಾಯೋಗಿಕ ಹಂತದಲ್ಲಿ ಸಂಜೆ ಕ್ಲಿನಿಕ್ ಗಳಾಗಿ ಸಮಯ ಬದಲಾವಣೆ ಮಾಡಲಾಗ್ತಿದೆ. ಇವುಗಳ ಯಶಸ್ವಿಯಾದರೆ ರಾಜ್ಯಾದ್ಯಂತ ಎಲ್ಲ ನಮ್ಮ ಕ್ಲಿನಿಕ್ ಗಳ ಸಮಯವನ್ನ ಬದಲಾವಣೆ ಮಾಡಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.
ಸಂಜೆ ವೇಳೆ ನಮ್ಮ ಕ್ಲಿನಿಕ್ ಗಳಲ್ಲಿ ಒಪಿಡಿ ತೆರೆಯುವುದರಿಂದ ಸಾಕಷ್ಟು ಅನುಕೂಲ ಕೂಡ ಆಗಲಿದೆ. ಹೀಗೆ ಆಗುವ ಬದಲಾವಣೆಯಿಂದ ಜನರಿಗೆ ಅನುಕೂಲ ಆಗುತ್ತಾ? ಜನ ಈ ಯೋಜನೆಯ ಫಲಾನುಭವಿ ಆಗ್ತಾರಾ ಅಂತ ಕಾದು ನೋಡಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಸಕ್ತಿ ತೋರಿದ್ದಾರೆ. ಬಳಿಕ ಹಂತ ಹಂತವಾಗಿ ನಮ್ಮ ಕ್ಲಿನಿಕ್ ಗಳಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳನ್ನ ಒದಗಿಸಲು ಯೋಜಿಸಲಾಗಿದೆ.
ಸುಮಾರು ಮೂರು ಲಕ್ಷದ 96 ಸಾವಿರ ಮಹಿಳೆಯರು ಹಾಗೂ 4 ಲಕ್ಷದ 21 ಸಾವಿರ ಪುರುಷರು ನಮ್ಮ ಕ್ಲಿನಿಕ್ ಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪ್ರತಿ ದಿನ ಸರಾಸರಿ 35 ರಿಂದ 40 ಜನರು ಚಿಕಿತ್ಸೆ ಪಡೆಯಲು ನಮ್ಮ ಕ್ಲಿನಿಕ್ ಗಳಿಗೆ ಭೇಟಿ ನೀಡುತ್ತಿದ್ದಾರೆ. ಇನ್ನೂ 2 ಲಕ್ಷದ 88 ಸಾವಿರ ಜನರು ರೋಗಪರೀಕ್ಷೆಗಳನ್ನ ಮಾಡಿಸಿಕೊಂಡಿದ್ದಾರೆ. ನಮ್ಮ ಕ್ಲಿನಿಕ್ ಗಳಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ವಿಸುವ ನಿಟ್ಟಿನಲ್ಲಿ ಮಹತ್ತರ ಬದಲಾವಣೆಗಳನ್ನ ತರಲಾಗುತ್ತಿದೆ.