ಪಿಲಿಕುಳದ ಪ್ರಾಣಿ ಸಂಗ್ರಹಾಲಯ ಬಳಿ ಕಂಬಳ ಸ್ಪರ್ಧೆ ಆಯೋಜನೆ ವಿಚಾರಣೆ; ಫೆ.18ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಮಂಗಳೂರಿನ ಪಿಲಿಕುಳದ ಪ್ರಾಣಿ ಸಂಗ್ರಹಾಲಯದ ಬಳಿ ಕಂಬಳ ಆಯೋಜನೆಯನ್ನು ಆಕ್ಷೇಪಿಸಿ ಹೈಕೋರ್ಟ್‌ನಲ್ಲಿ ಪೆಟಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಫೆ.18ಕ್ಕೆ ಮುಂದೂಡಲಾಗಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ವಿಭಾಗೀಯ ಪೀಠವು ಗುರುವಾರ ಅರ್ಜಿಯ ವಿಚಾರಣೆ ನಡೆಸಿತು.
ಈ ವೇಳೆ ಸರಕಾರಿ ಪರ ವಕೀಲರು, ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಇದರ ವರದಿ ಸಿದ್ಧಕೊಂಡಿದೆ. ಈ ವರದಿ ಪರಿಶೀಲಿಸಿದ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು. ಹೀಗಾಗಿ ಪ್ರಕರಣ ಇತ್ಯರ್ಥಪಡಿಸಿ ಬಿಡೋಣವೇ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ಅರ್ಜಿ ಕುರಿತಾಗಿ ಒಂದಿಷ್ಟು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಬಾಕಿಯಿದೆ. ಕಂಬಳ ಆಯೋಜನೆ ಬಗ್ಗೆ ನಮಗೆ ಆಕ್ಷೇಪವಿಲ್ಲ. ಆದರೆ ಎಲ್ಲಿ ಆಯೋಜಿಸಲಾಗುತ್ತಿದೆ ಎಂಬುವುದು ನಮ್ಮ ಪ್ರಶ್ನೆ?. ದ.ಕ. ಮತ್ತು ಉಡುಪಿಯ ಯಾವುದೇ ಭಾಗದಲ್ಲಿ ಕಂಬಳ ಸ್ಪರ್ಧೆ ಆಯೋಜನೆಗೆ ಆಕ್ಷೇಪವಿಲ್ಲ ಎಂದರು.
ರಾಜ್ಯ ಸರಕಾರದ ಪರ ವಕೀಲರು ಈ ಪ್ರಕರಣದಲ್ಲಿ ಅಡ್ವೋಕೆಟ್ ಜನರಲ್ ವಾದ ಮಂಡಿಸಬೇಕಿದ್ದು, ಅವರು ಇಂದು ಲಭ್ಯವಿಲ್ಲ. ಆದ್ದರಿಂದ, ವಿಚಾರಣೆಯನ್ನು ಮುಂದೂಡಬೇಕು ಎಂದು ಕೋರಿದರು. ಇದನ್ನು ಪುರಸ್ಕರಿಸಿದ ನ್ಯಾಯ ಪೀಠವು ಫೆ.18ಕ್ಕೆ ವಿಚಾರಣೆ ಮುಂದೂಡಿತು.
ಕಾಂತಾರ ಬಳಿಕ ಮತ್ತಷ್ಟು ಪ್ರಾಮುಖ್ಯತೆ: ಕಂಬಳ ಕ್ರೀಡೆ ಸಂಸ್ಕೃತಿಯ ಭಾಗವಾಗಿ ಆಯೋಜಿಸಲಾಗುತ್ತದೆ. ದ.ಕ. ಹಾಗೂ ಉಡುಪಿ ಭಾಗಕ್ಕೆ ಮಾತ್ರ ಸೀಮಿತವಾಗಿದ್ದ ಕಂಬಳವೂ ಕನ್ನಡದ ಚಲನಚಿತ್ರ ಕಾಂತಾರ ಬಂದ ಬಳಿಕ ಮತ್ತಷ್ಟು ಪ್ರಾಮುಖ್ಯತೆ ಪಡೆಯಿತು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಸಿಜೆ ಕುತೂಹಲ: ಕಂಬಳ ಸ್ಪರ್ಧೆ ಆಯೋಜನೆ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ಆಯೋಜನೆ ಮಾಡಲಾಗಿರುವ ಕಂಬಳದಲ್ಲಿ ಸುಮಾರು 300 ಕ್ಕೂ ಹೆಚ್ಚು ಕೋಣಗಳು ಭಾಗವಹಿಸಲಿದೆ. ಇದು ಬಹು ದೊಡ್ಡ ಕಾರ್ಯಕ್ರಮವಾಗಿದ್ದು, ಕಳೆದ ವರ್ಷ ಬೆಂಗಳೂರು ಅರಮನೆ ಮೈದಾನದಲ್ಲಿ ಸ್ಪರ್ಧೆ ಆಯೋಜನೆ ಮಾಡಿದ್ದು 11 ಲಕ್ಷಕ್ಕೂ ಹೆಚ್ಚಿನ ಜನರು ಸೇರಿರುವುದಾಗಿ ತಿಳಿಸಿದರು. ಈ ವೇಳೆ ಮುಖ್ಯ ನ್ಯಾಯಮೂರ್ತಿ 300 ಕೋಣಗಳಾ? ಮೈದಾನದಲ್ಲಿ ಓಟವೇ ಎಂದು ಕುತೂಹಲ ವ್ಯಕ್ತಪಡಿಸಿದರು.