ಎಚ್.ಡಿ.ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಇಂದು ಮಧ್ಯಾಹ್ನ 2.45ಕ್ಕೆ ಮುಂದೂಡಿಕೆ
ಬೆಂಗಳೂರು : ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ದಾಖಲಾಗಿದ್ದ ಮಹಿಳೆಯ ಅಪಹರಣ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ಮಧ್ಯಾಹ್ನ 2.45ಕ್ಕೆ ಮೂಂದೂಡಿದೆ.
ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಎಚ್.ಡಿ.ರೇವಣ್ಣ ವಿರುದ್ಧ ದಾಖಲಾಗಿದ್ದ ಅಪಹರಣ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಧೀಶರು ವಿಚಾರಣೆ ನಡೆಸಿದರು. ಈ ವಿಚಾರಣೆ ಕೈಗೆತ್ತಿಕೊಳ್ಳುತ್ತಿದ್ದಂತೆ ಎಸ್ಐಟಿ ತಂಡದ ಪರ ವಕೀಲ ಬಿ.ಎನ್.ಜಗದೀಶ್ ವಾದ ಮಂಡಿಸಿ, ನಿರೀಕ್ಷಣಾ ಜಾಮೀನು ಸಂಬಂಧ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ನೀಡಬೇಕು. ಅಪಹರಣ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನ ಬಂಧಿಸಲಾಗಿದೆ. ಆತನಿಂದ ಕೆಲ ಸಾಕ್ಷ್ಯಾಧಾರಗಳನ್ನ ಸಂಗ್ರಹಿಸಬೇಕು. ಹೀಗಾಗಿ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ರೇವಣ್ಣ ಪರ ವಕೀಲ ಮೂರ್ತಿ ನಾಯಕ್, ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ನೀಡುವುದು ಸರಿಯಲ್ಲ. ಐಪಿಸಿ 41 ಅಡಿ ನೊಟೀಸ್ ನೀಡಲಾಗಿದೆ. ಇಂದು ಸಂಜೆ 5.30ರೊಳಗೆ ವಿಚಾರಣೆಗೆ ಹಾಜರಾಗಬೇಕಿದೆ. ಅಪಹರಣ ಆರೋಪಕ್ಕೆ ಸಂಬಂಧಿದಂತೆ ಉಲ್ಲೇಖಿಸಿರುವ ಎಫ್ಐಆರ್ನಲ್ಲಿ ರೇವಣ್ಣ ಅವರೇ ಅಪಹರಣ ಮಾಡಿದ್ದಾರೆ ಎಂದು ನಮೂದಿಸಿಲ್ಲ. ಈ ಪ್ರಕರಣದಲ್ಲಿ ರಕ್ಷಣೆ ಬೇಕಿದೆ ಎಂದು ವಾದಿಸಿದರು. ವಾದ - ಪ್ರತಿವಾದ ಆಲಿಸಿದ ನ್ಯಾಯಾಲಯವು ಎಸ್ಐಟಿಗೆ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ, ಮಧ್ಯಾಹ್ನ 2.45ಕ್ಕೆ ವಿಚಾರಣೆ ಮುಂದೂಡಿದರು.