ಎಲ್ಲರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು: ಪಕ್ಷದ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ
ಯಾವಾಗ ಏನು ನಿರ್ಣಯ ಮಾಡಬೇಕೆಂದು ಹೈಕಮಾಂಡ್ಗೆ ಗೊತ್ತಿದೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (PTI)
ಬೆಂಗಳೂರು: ‘ಕಾಂಗ್ರೆಸ್ ಪಕ್ಷ ನಿಮಗೆ ಕೊಟ್ಟಿರುವ ಕೆಲಸವನ್ನು ಎಲ್ಲ ನಾಯಕರು ಬಾಯಿ ಮುಚ್ಚಿಕೊಂಡು ಮೊದಲು ಮಾಡಿ. ಯಾವಾಗ ಏನು ನಿರ್ಣಯ ಮಾಡಬೇಕೆಂದು ಹೈಕಮಾಂಡ್ಗೆ ಗೊತ್ತಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿವಾದಗಳು ನಡೆಯಬಾರದು. ಇದರಿಂದ ಪಕ್ಷಕ್ಕೆ ದೊಡ್ಡ ಹಾನಿಯಾಗುತ್ತದೆ. ಕೆಲವರು ಹೇಳಿದಂತೆ ಹೈಕಮಾಂಡ್ ನಡೆಯುವುದಿಲ್ಲ. ಸುಮ್ಮನೆ ಮಾತನಾಡುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ’ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಮುಖ್ಯಮಂತ್ರಿ ಬದಲಾವಣೆ ವಿಚಾರದ ಕುರಿತು ತೀರ್ಮಾನ ಕೈಗೊಳ್ಳಲು ಹೈಕಮಾಂಡ್ ಇದೆ. ನಾನು, ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಇತರ ಹಿರಿಯ ನಾಯಕರು ಇದ್ದೇವೆ. ಯಾವಾಗ ಏನು ನಿರ್ಣಯ ತೆಗೆದುಕೊಳ್ಳಬೇಕು ಅನ್ನೋದು ನಮಗೆ ಬಿಟ್ಟಿದ್ದು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಯಾವಾಗ ಮುಖ್ಯಮಂತ್ರಿ ಬದಲಾವಣೆ ಮಾಡಬೇಕೆಂದು ನಮಗೆ ಗೊತ್ತಿದೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದೆಲ್ಲ ಹೇಳಿಕೆಗಳನ್ನು ನೀಡಬೇಡಿ. ಯಾವಾಗ ಏನು ಮಾಡಬೇಕು ಎಂದು ನಮ್ಮ ಬಳಿ ಗುರಿಯಿದೆ. ಅದನ್ನು ನೋಡಿಕೊಂಡು ನಾವೇ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.