ಸಿನಿಮಾ ಅವಧಿಯಲ್ಲಿ ಜಾಹಿರಾತು ಪ್ರದರ್ಶನಕ್ಕೆ ನಿರ್ಬಂಧ ವಿಚಾರ | ಗ್ರಾಹಕರ ಆಯೋಗದ ಆದೇಶಕ್ಕೆ ಹೈಕೋರ್ಟ್ ತಡೆ

ಬೆಂಗಳೂರು: ಸಿನಿಮಾ ಅವಧಿಯಲ್ಲಿ ಜಾಹಿರಾತು ಪ್ರದರ್ಶನಕ್ಕೆ ನಿರ್ಬಂಧ ವಿಧಿಸಿದ್ದ ಗ್ರಾಹಕರ ಆಯೋಗದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಜಿಲ್ಲಾ ಗ್ರಾಹಕರ ಆಯೋಗದ ಆದೇಶ ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠವು ಗ್ರಾಹಕರ ಆಯೋಗದ ಆದೇಶಕ್ಕೆ ತಡೆ ನೀಡಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರು, ಗ್ರಾಹಕರ ಆಯೋಗ ತನ್ನ ವ್ಯಾಪ್ತಿ ಮೀರಿ ನಿರ್ದೇಶನ ನೀಡಿದೆ. ಹೀಗಾಗಿ ಆದೇಶ ರದ್ದಿಗೆ ಮನವಿ ಮಾಡಿದರು. ವಾದ ಆಲಿಸಿದ ಹೈಕೋರ್ಟ್ ಮೇಲಿನ ಆದೇಶ ನೀಡಿದೆ.
ಚಿತ್ರಮಂದಿರಗಳಲ್ಲಿ ಜಾಹಿರಾತು ಪ್ರದರ್ಶಿಸಿ ಗ್ರಾಹಕರ ಸಮಯ ವ್ಯರ್ಥ ಆರೋಪ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಿಗೆ ನಿರ್ದೇಶನ ನೀಡಿದ್ದ ಗ್ರಾಹಕರ ಆಯೋಗವು ಜಾಹಿರಾತು ಪ್ರದರ್ಶನಕ್ಕೆ ನಿರ್ಬಂಧ ಹೇರಿತ್ತು.
ಸಿನಿಮಾವೊಂದರ ಪ್ರದರ್ಶನ ವೇಳೆ 25 ನಿಮಿಷ ಜಾಹಿರಾತು ಪ್ರಶ್ನಿಸಿ ಅಭಿಷೇಕ್ ಎಂ.ಆರ್.ಎಂಬುವರು ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು. ಟಿಕೆಟ್ ಮೇಲೆ ಸಿನಿಮಾ ಪ್ರದರ್ಶನದ ನಿಖರ ಸಮಯ ಪ್ರದರ್ಶಿಸಬೇಕು. ಸಿನಿಮಾ ಅವಧಿಯಲ್ಲಿ ಜಾಹಿರಾತು ಪ್ರದರ್ಶನಕ್ಕೆ ನಿರ್ಬಂಧ ವಿಧಿಸಿ ಆಯೋಗ ಆದೇಶಿಸಿತ್ತು. ಹೀಗಾಗಿ ಜಿಲ್ಲಾ ಗ್ರಾಹಕರ ಆಯೋಗದ ಆದೇಶ ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಹೈಕೋರ್ಟ್ ಮೊರೆ ಹೋಗಿತ್ತು.