ಸಂಚಾರ ಪೊಲೀಸರ ವಿರುದ್ಧ ಸಾರ್ವಜನಿಕ ಹಿತಾಸಕ್ತಿಯ ಕುಟುಕು ಕಾರ್ಯಾಚರಣೆಗೆ ಹೈಕೋರ್ಟ್ ಸಮ್ಮತಿ
ಬೆಂಗಳೂರು, ನ. 5: ಸಾರ್ವಜನಿಕ ಹಿತಾಸಕ್ತಿಯ ಕುಟುಕು ಕಾರ್ಯಾಚರಣೆಗೆ ಹೈಕೋರ್ಟ್ ಸಮ್ಮತಿಸಿ, ಸಂಚಾರ ಪೊಲೀಸರ ವಿರುದ್ಧದ ಸ್ಟಿಂಗ್ ಆಪರೇಷನ್ (sting operation) ಎತ್ತಿಹಿಡಿದಿದೆ. ಜೊತೆಗೆ ಎನ್ ಬ್ರಾಡ್ ಕಾಸ್ಟಿಂಗ್ ಸ್ಟಾಂಡರ್ಡ್ ಅಥಾರಿಟಿ(ಬಿಎಸ್‍ಎ), ಕೇಬಲ್ ಟೆಲಿವಿಷನ್ ನೆಟ್ವರ್ಕ್ ಕಾಯಿದೆಯ ಕುಟುಕು ಕಾರ್ಯಾಚರಣೆಗಳು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆದೇಶಿಸಿತು.
ಅಧೀನ ನ್ಯಾಯಾಲಯದಲ್ಲಿ ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಬೆಂಗಳೂರಿನ ಈಶಾನ್ಯ ವಲಯದ ಸಂಚಾರ ವಿಭಾಗದ ಎಸಿಪಿ ಎಂ.ಎಸ್.ಅಶೋಕ್ ಮತ್ತಿತರ ಹಲವು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.
ಕುಟುಕು ಕಾರ್ಯಚರಣೆ ಮಾಡುವಾಗ ನಿಯಮದಂತೆ ಎಲ್ಲ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಂಪಾದಕರ ತಂಡದ ಮುಖ್ಯಸ್ಥರ ಪೂರ್ವಾನುಮತಿ ಪಡೆದಿರಬೇಕು. ಸಾರ್ವಜನಿಕ ಹಿತಾಸಕ್ತಿ, ತಪ್ಪು ಬಯಲುಗೊಳಿಸುವ ಉದ್ದೇಶ ಹೊಂದಿರಬೇಕು. ಆದರೆ, ಅದರಿಂದ ವ್ಯಕ್ತಿಯ ಖಾಸಗಿ ಜೀವನಕ್ಕೆ ತೊಂದರೆಯಾಗುವಂತಿರಬಾರದು. ಲಂಚ ಸ್ವೀಕರಿಸುವಂತೆ ಆಮಿಷ ಒಡ್ಡುವಂತಿರಬಾರದು. ಆದರೆ, ಬೆಂಗಳೂರು ಪ್ರವೇಶಿಸಲು ಗ್ರಾನೈಟ್ ಲಾರಿಗಳಿಂದ ಲಂಚ ಸ್ವೀಕರಿಸುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರ ಮೇಲಿನ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಪೊಲೀಸರು ಲಂಚಕ್ಕೆ ಬೇಡಿಕೆ ಇಟ್ಟು ಸ್ವೀಕರಿಸಿರುವ ದೃಶ್ಯಗಳಿವೆ. ಹೀಗಾಗಿ, ಸಂಚಾರ ಪೊಲೀಸರ ವಿರುದ್ಧದ ಕುಟುಕು ಕಾರ್ಯಾಚರಣೆ ಎತ್ತಿಹಿಡಿಯಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ. ಆದರೆ, ವಾಣಿಜ್ಯ ತೆರಿಗೆ ಅಧಿಕಾರಿಗಳೂ ಸಹ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂಬ ವಿಚಾರ ಸಾಬೀತಾಗದ ಹಿನ್ನೆಲೆಯಲ್ಲಿ ಅವರ ವಿರುದ್ಧ ಸ್ಟಿಂಗ್ ಆಪರೇಷನ್ ಆಧರಿಸಿ ದಾಖಲಿಸಿದ್ದ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ.