ಹೊಸದಾಗಿ ಕನಿಷ್ಠ ವೇತನ ನಿಗದಿಗೆ ಹೈಕೋರ್ಟ್ ನಿರ್ದೇಶನ
ರಾಜ್ಯ ಸರಕಾರ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸಿದ ನ್ಯಾಯಾಲಯ
ಹೈಕೋರ್ಟ್
ಬೆಂಗಳೂರು: ಅಸಂಘಟಿತ ವಲಯದ ಕಾರ್ಮಿಕರಿಗೆ ಕನಿಷ್ಠ ವೇತನ ಕುರಿತಂತೆ ರಾಜ್ಯ ಸರಕಾರ 2022ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿದೆ. ಸುಪ್ರೀಂಕೋರ್ಟ್ ರೋಪ್ಟಾ ಕೋಸ್ ಪ್ರಕರಣದಲ್ಲಿ ತಿಳಿಸಿರುವ ಮಾರ್ಗಸೂಚಿಗಳ ಅನ್ವಯದಂತೆ ಮರು ಲೆಕ್ಕಾಚಾರ ಮಾಡುವಂತೆ ಸರಕಾರಕ್ಕೆ ನಿರ್ದೇಶನ ನೀಡಿದೆ.
ಇದರಿಂದಾಗಿ ಹೊಸದಾಗಿ ಕನಿಷ್ಠ ವೇತನ ನಿಗದಿಪಡಿಸಬೇಕಿದೆ. ಇದರಿಂದ ಕಾರ್ಮಿಕರ ಹಾಲಿ ವೇತನವು ಹೆಚ್ಚಳವಾಗಲಿದೆ. ರಾಜ್ಯ ಸರಕಾರ ಅಸಂಘಟಿತ ವಲಯದ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಪಡಿಸಿ 2022ರ ಜೂ. 6ರಂದು ಹೊರಡಿಸಿದ್ದ ಅಧಿಸೂಚನೆ ರದ್ದು ಕೋರಿ ಇಂಡಿಯನ್ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎಐಯುಟಿಯುಸಿ) ಮತ್ತು ಎಂಜಿನಿಯರಿಂಗ್ ಅಂಡ್ ಜನರಲ್ ವರ್ಕರ್ಸ್ ಯೂನಿಯನ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಹೈಕೋರ್ಟ್ ಏಕಸದಸ್ಯಪೀಠ, ಈ ಆದೇಶ ನೀಡಿದೆ. ಅಲ್ಲದೆ, ಮುಂದಿನ ಎರಡು ತಿಂಗಳಲ್ಲಿ ವೇತನ ಪರಷ್ಕರಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದೆ.
ಪ್ರಕರಣವೇನು?: ಸುಮಾರು 34 ವಲಯಗಳ ಅಸಂಘಟಿತ ಕಾರ್ಮಿಕ ವಲಯಕ್ಕೆ ಶೇ.5 ರಿಂದ ಶೇ.10ವರೆಗೂ ಕನಿಷ್ಠ ವೇತನ ಹೆಚ್ಚಳ ಮಾಡಿ ರಾಜ್ಯ ಸರಕಾರ 2022 ರ ಜೂ.25 ರಂದು ಅಧಿಸೂಚನೆ ಹೊರಡಿಸಿತ್ತು.
ಆದರೆ, ಸುಪ್ರೀಂಕೋರ್ಟ್ ಸೂಚಿಸಿರುವ ನಿಯಮಗಳನ್ನು ಅನುಸರಿಸಿಲ್ಲ. ಕಾರ್ಮಿಕ ಇಲಾಖೆಗಳ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಆದ ಕಾರಣ ಅಧಿಸೂಚನೆ ರದ್ದುಪಡಿಸಬೇಕು. ಅಲ್ಲದೆ, ಸುಪ್ರೀಂಕೋರ್ಟ್ 1992 ರಲ್ಲಿ ರೋಪ್ಟಾ ಕೋಸ್ ನೀಡಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಕನಿಷ್ಠ ವೇತನವನ್ನು ನಿಗದಿ ಪಡಿಸಲು ನಿರ್ದೇಶನ ನೀಡಬೇಕು ಎಂದು ಕೋರಿದ್ದರು.